ಮರಾಠಿ ಇತಿಹಾಸ ಸಂಶೋಧಕ ಡಾ. ರಾ.ಚಿ. ಢೇರೆ ಅವರ ಶಿವಾಜಿ ಮೂಲದ ಕುರಿತು 'ಶಿಖರ ಶಿಂಗಣಾಪುರಚಾ ಶಂಬು ಮಹಾದೇವ' ಸಂಶೋಧನಾತ್ಮಕ ಕೃತಿಯನ್ನೇ ಡಾ. ಸರಜೂ ಕಾಟ್ಕರ್ ' ಶಿವಾಜಿ ಮೂಲ ಕನ್ನಡ ನೆಲ' ರೂಪದಲ್ಲಿ ಕನ್ನಡಕ್ಕೆ ಪರಿಚಯಿಸಿದ್ದಾರೆ.
ಶಿವಾಜಿ ಮೂಲದ ಕುರಿತು ಅದರಲ್ಲೂ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿವಾದಗಳು ಇದ್ದವು. ಕೆಲವು ಇತಿಹಾಸ ಸಂಶೋಧಕರು ಶಿವಾಜಿ ಮೂಲ ರಾಜಸ್ತಾನ ಅಥವಾ ರಜಪೂತ ಕ್ಷತ್ರೀಯ ಎಂದು ಸಾಬೀತು ಪಡಿಸಿದ್ದರು. ಇದಕ್ಕೆ ಕಾರಣ ಶಿವಾಜಿಯ ಪಟ್ಟಾಭಿಷೇಕದ ಸಂದರ್ಭದಲ್ಲಿ ಗಾಗಾಭಟ್ಟ ಎಂಬ ಕಾಶಿ ಪಂಡಿತ ಅವರನ್ನು ಸಿಸೋದಿಯಾ ವಂಶಕ್ಕೆ ಸೇರಿಸಿದ್ದ . ಈ ವಂಶಾಂತರಕ್ಕೆ ಕಾರಣ ಇಷ್ಟೆ. ಕ್ಷತ್ರೀಯರು ಹೊರತು ಪಡಿಸಿ ಉಳಿದವರು ಯಾರೂ ಸಿಂಹಾಸನ ಏರುವಂತಿಲ್ಲ ಮತ್ತು ರಾಜ್ಯಾಡಳಿತ ನಡೆಸುವಂತಿಲ್ಲ ಎಂಬ ಧಾರ್ಮಿಕ ನಿಯಮ. ಆ ಸಂದರ್ಭದಲ್ಲೇ ಶಿವಾಜಿ ಭೋಸ್ಲೆ ಆಗಿದ್ದು. ಮತ್ತು ಅಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿವಾಜಿ ಮಹಾರಾಜ ಹಿಂದವಿ ಸಾಮ್ರಾಜ್ಯದ ಅದಿಪತ್ಯ ವಹಿಸಿಕೊಳ್ಳುವುದು ಅಗತ್ಯವಿತ್ತು.
ಶಿವಾಜಿ ಮೂಲದ ಕುರಿತು ಮರಾಠಿಯ ಇನ್ನೊಂದು ಸಂಶೋಧನಾ ಗ್ರಂಥ 'ಕರ್ನಾಟಕ ಆನಿ ಮಹಾರಾಷ್ಟ್ರಾಚಿ ಸಾಂಸ್ಕೃತಿಕ ಸಂಬಂಧ' (ಕರ್ನಾಟಕ ಮಹಾರಾಷ್ಟ್ರದ ನಡುವಿನ ಸಾಂಸ್ಕೃತಿಕ ಸಂಬಂಧ) ದಲ್ಲಿಯೂ ಶಿವಾಜಿ ನೆಲ ರಾಜಸ್ತಾನವಲ್ಲ. ಶಿವಾಜಿಯ ಮೂಲ ದಕ್ಷಿಣ ಭಾರತ ಎಂದು ಹೇಳಲಾಗಿದೆ. ಕರ್ನಾಟಕವನ್ನು ಆಳಿದ ಹೊಯ್ಸಳ ವಂಶಕ್ಕೆ ಶಿವಾಜಿ ಸೇರಿದವನು ಎಂದು ಪ್ರತಿಪಾದಿಸಲಾಗಿದೆ. ತಮಿಳುನಾಡಿನ ಜಿಂಜಿಯಿಂದ ಇವರು ಬಂದವರು ಎಂದು ವಾದಿಸಲಾಗುತ್ತದೆ.
ಹೊಯ್ಸಳ ಎನ್ನುವುದು ಅಪಭ್ರಂಶಗೊಂಡು ಭೋಸ್ಲೆ ಅಗಿರುವ ಸಾಧ್ಯತೆ ಇದೆ. ಡಾ. ಸರಜೂ, ಬರೆದಿರುವ ಶಿವಾಜಿ ನೆಲದಲ್ಲಿ ಶಿರಹಟ್ಟಿಯ ಸಮೀಪದ ಸೋರಟೂರಿನ ಬಳಿಯಪ್ಪ ಎಂಬ ವ್ಯಕ್ತಿ ಮಾಣದೇಶಕ್ಕೆ (ಮಹಾರಾಷ್ಟ್ರಕ್ಕೆ) ವಲಸೆ ಹೋಗಿರುವ ಕುರಿತು ಶಿಲಾಶಾಸನಗಳು ಇವೆ. 14 ಮತ್ತು 15ನೇ ಶತಮಾನದ ಅವಧಿಯಲ್ಲಿ ಸೋರಟೂರಿನ ಭಾಗದಲ್ಲಿ ಬಹುದೊಡ್ಡ ಬರಗಾಲ ಕಾಡಿತ್ತು ಎಂದು ದಾಖಲೆಗಳು ಹೇಳುತ್ತವೆ. ಇದೇ ಸಂದರ್ಭದಲ್ಲಿ ಸೋರಟೂರಿನ ಗವಳಿಗ ಬಳಿಯಪ್ಪ ಮಹಾರಾಷ್ಟ್ರದತ್ತ ವಲಸೆ ಹೋಗಿರುವ ಸಾಧ್ಯತೆ ಇದೆ. ಕಾಲಾನಂತರದಲ್ಲಿ ಅಲ್ಲಿನ ಖಾಯಂ ನಿವಾಸಿಗಳು ಆಗಿರಬಹುದು.
ಶಿವಾಜಿ ಆಡಳಿತಾವಧಿ ಅಥವಾ ನಂತರದ ಕೂಡ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ನಡುವೆ ಸಾಂಸ್ಕೃತಿಕ ಸಂಬಂಧ ಉಳಿಯುತ್ತದೆ. ಉದಾಹರಣೆಗೆ ಪ್ರಖ್ಯಾತ ಪಂಢರಪುರದ ವಿಠಲನ ಮೂರ್ತಿ ಹಂಪಿಯಲ್ಲಿನ ವಿಜಯ ವಿಠಲನ ಮೂರ್ತಿ ಎಂದು ಹೇಳುತ್ತಾರೆ. ಅದು ಅಲ್ಲದೇ ಕೊಲ್ಹಾಪುರದ ಮಹಾಲಕ್ಷ್ಮಿ ಜಾತ್ರೆಯ ವೇಳೆ ತಿರುಪತಿಯ ವೆಂಕಟೇಶ್ವರನ ಸನ್ನಿಧಾನದಿಂದ ಈಗಲೂ ಸೀರೆ ಮುಂತಾದ ವಸ್ತುಗಳನ್ನು ಕಳುಹಿಸಿಕೊಡಲಾಗುತ್ತದೆ. ಅಲ್ಲದೇ ಶಿವಾಜಿ ಕೂಡ ಶ್ರೀಶೈಲದ ಚನ್ನಮಲ್ಲಿಕಾರ್ಜುನನ ಭಕ್ತ. ಪಟ್ಟಾಭಿಷೇಕದ ನಂತರ ಶ್ರೀಶೈಲಕ್ಕೆ ಹೋಗಿದ್ದು ಇದೆ. ಹಾಗೇ ದರ್ಶನಕ್ಕೆ ಹೋಗಿದ್ದ ಸಂದರ್ಭದಲ್ಲಿ ಶ್ರೀಶೈಲದ ಮಲ್ಲಿಕಾರ್ಜುನನಿಗೆ ಉಂಬಳಿ ಬರೆದಿರುವ ಮತ್ತು ಗೋಪುರ ಕೆತ್ತಿಸಿದ ಮರಾಠಿ ಶಾಸನಗಳು ಶ್ರೀಶೈಲದಲ್ಲಿ ಲಭ್ಯ.
ತಮಿಳುನಾಡಿನ ಜಿಂಜಿ ಕೋಟೆಯನ್ನು ಅವರು ಹೇಗೆ ತಮ್ಮ ಸ್ವಾಧೀನ ಪಡಿಸಿಕೊಂಡರು ಎನ್ನುವುದು ಡಾ. ಸರಜೂ ಅವರ ಶಿವಾಜಿ ಮೂಲ ಕನ್ನಡ ನೆಲದಲ್ಲಿ ಸ್ಪಷ್ಟವಾಗುತ್ತಿಲ್ಲ. ಬಹುಶಃ ಮಲ್ಲಿಕ್ ಕಾಫರನ ದಾಳಿಗೆ ಸಿಕ್ಕ ಹೊಯ್ಸಳ ಸಾಮ್ರಾಜ್ಯ ಅವನತಿಯತ್ತ ಸಾಗಿತು. ಅದೇ ಕಾಲಕ್ಕೆ ತಲೆ ಎತ್ತಿ ನಿಂತ ಇತರ ಸಾಮಂತ ರಾಜ್ಯಗಳಿಂದಾಗಿ ಹೊಯ್ಸಳ ವಂಶಜರು ಜಿಂಜಿಯತ್ತ ವಲಸೆ ಹೋಗಿರಬಹುದೇ? ಶಿವಾಜಿ ಮೂಲದ ಕುರಿತು ಮರಾಠಿಯಲ್ಲಿ ಸಾಕಷ್ಟು ಸಂಶೋಧನೆ ಗ್ರಂಥಗಳು ಬಂದಿವೆ. ಅವುಗಳ ಒಟ್ಟು ಸಾರಾಂಶ ಮಾತ್ರ ಒಂದೇ ಶಿವಾಜಿ ಮೂಲ ರಾಜಸ್ತಾನಕ್ಕೆ ಸೇರಿದ್ದಲ್ಲ. ಅದು ದಕ್ಷಿಣಕ್ಕೆ ಸೇರಿದ್ದು. ಹಾಗಿದ್ದರೇ ಅದು ಹೊಯ್ಸಳ ವಂಶವೇ ಎನ್ನುವುದು ನಿರ್ಧಾರವಾಗಬೇಕಿದೆ.
ಪುಸ್ತಕ ಪರಿಚಯ: ಶಿವಾಜಿ ಮೂಲ ಕನ್ನಡ ನೆಲ, ಡಾ. ಸರಜೂ ಕಾಟ್ಕರ್
ಡಾ. ರಾ.ಚಿ. ಢೇರೆ ಅವರ ಶಿಖರ ಶಿಂಗಣಾಪುರಚಾ ಶಂಭು ಮಹಾದೇವ ಕೃತಿ ಆಧಾರಿತ
ಲೋಹಿಯಾ ಪ್ರಕಾಶನ ಬಳ್ಳಾರಿ
ಬೆಲೆ: 100 ರುಪಾಯಿ.
ಲೋಡ್ ಆಗುತ್ತಿದೆ......