ಬಿಜೆಪಿಯದ್ದೂ ಪಂಚ ಕ್ಷೇತ್ರಗಳಲ್ಲಿ ಸಾಧನೆ ಶೂನ್ಯ. ತನ್ನದೇ ಸರ್ಕಾರವಿದ್ದರೂ ಜನರ ಕೋಪಕ್ಕೆ ಗುರಿಯಾದ ಪಕ್ಷ. ಆಪರೇಷನ್ ಕಮಲಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ಆಪರೇಷನ್ ಗೆ ಒಳಗಾದ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಆ ಪಕ್ಷಕ್ಕೆ ಇತ್ತು. ಅಲ್ಲಿ ಬಿಟ್ಟು ಬೇರೆಲ್ಲಿಯೋ ಗೆದ್ದಿದೆ. ಬಿಜೆಪಿಯ ಸೋಲು ಗೆಲವಿನ ಇತಿಹಾಸ ಗಮನಿಸಿದರೆ ಗೆದ್ದ ಜಾಗಗಳನ್ನು ಭವಿಷ್ಯತ್ತಿನಲ್ಲಿ ಗಟ್ಟಿ ಮಾಡಿಕೊಳ್ಳುತ್ತದೆ ಎಂದು ಹೇಳುವಂತಿಲ್ಲ. ಹೊಸ ಜಾಗದಲ್ಲಿ ಗೆಲ್ಲುವುದು ಹಳೇ ಜಾಗದಲ್ಲಿ ಸೋಲುವುದು ಬಿಜೆಪಿಯ ಚಾಳಿ.
ಆಪರೇಷನ್ ಕಮಲಕ್ಕೆ ಈ ಹಿಂದೆ ಒಳಗಾಗಿದ್ದ ಎಂಟು ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಐದು ಸ್ಥಾನಗಳಲ್ಲಿ ಗೆದ್ದು ಸಾಧನೆ ಮಾಡಿತ್ತು. ಅದರಲ್ಲಿ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿನ ಗೆಲವು ಬಿಜೆಪಿಯ ಗೆಲವಲ್ಲ ಅವುಗಳು ಬಂದಿದ್ದು ಅಭ್ಯರ್ಥಿಯ ವರ್ಚಸ್ಸಿನಿಂದ. ಒಂದು ಕಡೆ ಸಕ್ಕರೆ ರಾಜಕೀಯ ಇನ್ನೊಂದು ಕಡೆ ಜಾರಕಿಹೊಳಿ ಕುಟುಂಬ. ಮೇಲಾಗಿ ಬಾಲಚಂದ್ರ ಜಾರಕಿಹೊಳಿ ಅರಬಾವಿ ಕ್ಷೇತ್ರದಲ್ಲಿ ಕೆಲಸ ಮಾಡಿ ತೋರಿಸಿದ ವ್ಯಕ್ತಿ. ಹೀಗಾಗಿ ಆ ಗೆಲವುಗಳನ್ನು ಬಿಜೆಪಿಯ ಗೆಲವು ಎಂದು ಹೇಳಲು ಸಾಧ್ಯವೆ ಇಲ್ಲ. ಮುಂದೊಂದು ದಿನ ಅವರಿಬ್ಬರೂ ಬೇರೆ ಪಕ್ಷಕ್ಕೆ ಹೊದಲ್ಲಿ ಅವರೊಂದಿಗೆ ಆ ಎರಡು ಸ್ಥಾನಗಳು ಬಿಜೆಪಿಯಿಂದ ಕೈಬಿಟ್ಟಂತೆಯೇ.
ಇದೇ ರೀತಿ ಗೋವಿಂದರಾಜನಗರ ಕ್ಷೇತ್ರದಲ್ಲಿಯೂ ಆಗಬೇಕಿತ್ತು. ವಿ. ಸೋಮಣ್ಣ ಪ್ರಬಲ ಮತ್ತು ಪ್ರಭಾವಿ ರಾಜಕಾರಣಿ. ಗೆಲ್ಲಲೇಬೇಕಾಗಿತ್ತು. ಗೆದ್ದಿಲ್ಲ. ತಾಂತ್ರಿಕವಾಗಿ ಚಿತ್ತಾಪುರ ಇಂದು ಬಿಜೆಪಿ ಪಾಲಾಗಿದೆ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ್ ಖರ್ಗೆ ರಾಜ್ಯ ರಾಜಕಾರಣಕ್ಕೆ ಚಿತ್ತಾಪುರದಿಂದ ಇಳಿದರೆ. ಚಿತ್ತಾಪುರ ಉಳಿಸಿಕೊಳ್ಳುವ ಎಂಟೇದೆ ಬಿಜೆಪಿಗಿದೆಯೇ?
ಕೊಳ್ಳೆಗಾಲ ಕೂಡ ಇದೇ ರೀತಿ ಬಿಜೆಪಿ ಪಾಲಾಗಿದೆ. ಬಿಎಸ್ಪಿಯಿಂದ ಸುಭಾಷ್ ಭರಣಿ ನಿಲ್ಲದಿದ್ದಲ್ಲಿ. ಕಾಂಗ್ರೆಸ್ ಅಲ್ಲಿ ಸುಲಭವಾಗಿ ಗೆಲ್ಲುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಬೇಕಾದಷ್ಟು ಮತಗಳನ್ನು ಭರಣಿ ಹಿಂದುಳಿದ ವರ್ಗದವರ ಮತಗಳಿಂದ ಕಿತ್ತುಕೊಂಡು ಬಿಜೆಪಿಯ ಹಾದಿ ಸಲೀಸು ಮಾಡಿದ್ದಾರೆ. ರಾಮನಗರ ಜೆಡಿಎಸ್ ಭದ್ರಕೋಟೆ. ಜೊತೆಗೆ ಆಪರೇಷನ್ ಕಮಲಕ್ಕೆ ಒಳಗಾದ ಸಿ.ಪಿ. ಯೋಗೇಶ್ವರ, ತೆನೆ ಹೊತ್ತ ಮಹಿಳೆಯ ಕೈಯಿಂದ ಸೋಲು ಅನುಭವಿಸಿಯಾಗಿದೆ.
ಒಟ್ಟಿನಲ್ಲಿ ಬಿಜೆಪಿ ತನ್ನ ಆಡಳಿತ ಶೈಲಿ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಅನುಭವಿಸಿದ ಸೋಲನ್ನು ಇಲ್ಲಿಯೂ ಅನುಭವಿಸಬೇಕಾಗುತ್ತದೆ. ಜೆಡಿಎಸ್ ಕಾಂಗ್ರೆಸ್ ಪರ್ಯಾಯವಾಗುವುದಿಲ್ಲ. ಕಾಂಗ್ರೆಸ್ ಒಂದೇ ಏಕಮೇವಾದ್ವಿತೀಯವಾಗುತ್ತದೆ. ಬಿಜೆಪಿಯ ವೈಫಲ್ಯವೇ ಕಾಂಗ್ರೆಸ್ ಗೆಲವಿನ ದಾರಿಯಾಗುವುದರಲ್ಲಿ ಖಂಡಿತ ಅನುಮಾನವಿಲ್ಲ.
ಲೋಡ್ ಆಗುತ್ತಿದೆ......