ವಾಲ್ಮಿಕಿ ಎಂಬ ಡಾ. ಭೀಮರಾವ್ ಘಸ್ತಿ
ದಲಿತ ಸಾಹಿತ್ಯ ಪ್ರಬುದ್ಧವಾಗಿ ಬೆಳೆದಿರುವುದು ನನಗೆ ತಿಳಿದ ಮಟ್ಟಿಗೆ ಮರಾಠಿಯಲ್ಲಿ ಮಾತ್ರ. ಐದು ಸಾವಿರ ವರುಷಗಳ ರೋಷ ಅವಮಾನಗಳು ಒಮ್ಮಿಂದೊಮ್ಮೆಲೆ ಜಲಪಾತದ ಪ್ರವಾಹೋಪಾದಿಯಲ್ಲಿ ಸಾಹಿತ್ಯ ಲೋಕಕ್ಕೆ ನುಗ್ಗಿತು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಮರಾಠಿಯಲ್ಲಿ ಸುಮಾರು 400ಕ್ಕೂ ಹೆಚ್ಚು ದಲಿತ ಸಾಹಿತ್ಯ ಪ್ರಕಟವಾಯಿತು. ಸಾಮಾನ್ಯ ಹಮಾಲಿಯಿಂದ ಹಿಡಿದು. ಐಎಎಸ್ ಅಧಿಕಾರಿಯೂ ತನ್ನ ನೋವು ಅವಮಾನ, ಗುರಿಯೇಡೆಗಿನ ತನ್ನ ಶ್ರದ್ಧೆಯನ್ನು ತನಗೆ ತಿಳಿದ ಭಾಷೆಯಲ್ಲಿ ದಾಖಲಿಸಿದ.
ಇದಕ್ಕೆ ಪ್ರತಿಕಾರ ಎಂಬಂತೆಯೋ ಅಥವಾ ಇನ್ನಾವ ಕಾರಣಗಳಿಗಾಗಿಯೋ ದಲಿತ ಸಾಹಿತ್ಯ ಕಲಾತ್ಮಕವಾಗಿಲ್ಲ ಎಂಬ ಆಪಾದನೆ ವಿಮರ್ಶಕರಿಂದ ಬಂತು. ಕಲಾತ್ಮಕತೆ ಇಲ್ಲದಿದ್ದರೇ ಏನಂತೆ ಇಡೀ ಜೀವನದಿಯೇ ಪ್ರವಾಹವಾಗಿ ಹರಿದಿದ್ದು ಓದುಗರ ಮನಸ್ಸನ್ನು ತಟ್ಟಿತು.
ಇಂತಹ ಪ್ರವಾಹ ರೂಪಿ ಕಥೆಯೇ ಬೆಳಗಾವಿ ಜಿಲ್ಲೆಯ ಯಮನಾಪುರ ಎಂಬ ಕುಗ್ರಾಮದ ಬೇಡರ ಜಾತಿಯ ಡಾ. ಭೀಮರಾವ್ ಘಸ್ತಿ ಅವರ ' ಬೇರಡ' ಮರಾಠಿಯಲ್ಲಿದ್ದ ಅವರ ಜೀವನ ಚರಿತ್ರೆಯನ್ನೇ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ನ ಪ್ರಧಾನ ವರದಿಗಾರ ಡಾ.ಸರಜೂ ಕಾಟ್ಕರ್ ಕನ್ನಡಕ್ಕೆ 'ವಾಲ್ಮಿಕಿ' ರೂಪದಲ್ಲಿ ತಂದಿದ್ದಾರೆ. ನಾನಂತೂ ಸಿಂಗಲ್ ಸಿಟ್ಟಿಂಗ್ ನಲ್ಲಿ ಪುಸ್ತಕ ಓದಿ ಮುಗಿಸಿದ್ದೇನೆ.
ದಲಿತ ಸಾಹಿತ್ಯದತ್ತ ನನಗೆ ಮೊದಲಿನಿಂದಲೂ ಆಸಕ್ತಿ. ಮರಾಠಿಯಲ್ಲಿದ್ದರೂ ಸೈ ಕನ್ನಡದಲ್ಲಿದ್ದರೂ ಸೈ. ಬೆಳಗಾವಿಯಿಂದ 15-20 ಕಿ. ಮೀ. ದೂರದಲ್ಲಿ ಇರುವ ಯಮನಾಪುರ ಮತ್ತು ಕಾಕತಿ ಸುತ್ತಲಿನ ಹಳ್ಳಿಗಳಲ್ಲಿ ಬೇಡರ ಜನವಸತಿಯೇ ಹೆಚ್ಚು. ಇಲ್ಲಿ ಹುಟ್ಟಿ ಬೆಳೆದ ಡಾ. ಭೀಮರಾವ್ ಘಸ್ತಿ ಅಂದಿನ ಕಾಲದಲ್ಲೂ ಪ್ರತಿದಿನ ಬೆಳಗಾವಿಯವರೆಗೆ ನಡೆದುಕೊಂಡು ಬಂದು ಹೈಸ್ಕೂಲು, ಕಾಲೇಜು ಶಿಕ್ಷಣ ಪೂರೈಸಿದ್ದು ಗಟ್ಟಿ ಜೀವದ ಹೆಗ್ಗುರುತ ಎನ್ನಲು ಅಡ್ಡಿಯಿಲ್ಲ. ಘಸ್ತಿ ಅವರ ಹೋರಾಟದ ಜೀವನ ಪ್ರಾರಂಭವಾಗಿದ್ದು, ಬೆಳಗಾವಿಯಲ್ಲೇ ಅಂದಿನ ದಿನಗಳಲ್ಲಿ ಅತಿ ದೊಡ್ಡ ಫ್ಯಾಕ್ಟರಿ ಎನಿಸಿಕೊಂಡ ಹಿಂಡಾಲ್ಕೋ ಫ್ಯಾಕ್ಟರಿ ವಿರುದ್ಧ. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಲು ನಡೆದ ಹೋರಾಟ. ಹೀಗೆ ಹತ್ತು ಹಲವು ಮಜಲುಗಳಲ್ಲಿ ಸಾಗಿದೆ. ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರೂ ತನ್ನವರ ಬೆಂಗಾವಲಿಗೆ ನಿಂತ ಡಾ. ಭೀಮರಾವ್ ಘಸ್ತಿ. ಇಂದಿನ ಸುಶಿಕ್ಷಿತ ದಲಿತರಿಗೆ ಮಾದರಿಯಾಗಬೇಕು. ತನ್ನ ಸುಖ ಮರೆತ ಈ ವ್ಯಕ್ತಿ ಬೆಳಗಾವಿಯಿಂದ ಇಚ್ಚಲಕರಂಜಿವರೆಗೆ ಸೈಕಲ್ ತುಳಿದ ಘಟನೆಯೂ ಇದರಲ್ಲಿದೆ. ಬೆಳಗಾವಿಯಿಂದ ಇಚ್ಚಲಕರಂಜಿ ಕನಿಷ್ಠ 70ರಿಂದ 80 ಕಿ.ಮೀ. ಆದರೂ ಆಗುತ್ತದೆ. ತನ್ನವರಿಂದಲೇ ಜೀವಕ್ಕೆ ಅಪಾಯಕ್ಕೆ ತಂದುಕೊಂಡ ಕಥೆಯೂ ಇದೆ.
ಬೆಳಗಾವಿಯಲ್ಲಿ ಶಿಕ್ಷಣ ಪಡೆಯುತ್ತಿದ್ದ ವೇಳೆ ಶಾಲೆಯಿಂದ ಹೊರದಬ್ಬಿಸಿಕೊಂಡ, ವಿದ್ಯಾರ್ಥಿ ನಿಲಯಕ್ಕೆ ವಸತಿ ನಿರಾಕರಿಸಲ್ಪಟ್ಟ ಡಾ. ಭೀಮರಾವ್ ಘಸ್ತಿ ಸೇರಿದ್ದು ಡಕಾಯಿತಿ ಜನಾಂಗ ಎಂದು ಹೆಸರು ಪಡೆದ ಬೇಡರ ಕುಲಕ್ಕೆ. ಈ ಎಲ್ಲವೂಗಳ ವಿರುದ್ಧ ಸಾಗಿದ ಅವರು ಸ್ನಾತಕೋತ್ತರ ಮತ್ತು ಪಿಎಚ್ ಡಿ ಅಧ್ಯಯನ ಮಾಡಿದ್ದು. ಹೈದರಾಬಾದಿನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ. ಅಲ್ಲಿಂದ ಉನ್ನತ ವ್ಯಾಸಂಗಕ್ಕೆ ರಷ್ಯಾವರೆಗೆ ಹೋಗಿ ಬಂದ ಈ ವ್ಯಕ್ತಿ ನಿರಾಂತಕ ಜೀವನ ನಡೆಸಬಹುದಿತ್ತು. ಅದೆಲ್ಲವುಗಳನ್ನು ತೊರೆದು ಬೇಡರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿ ಹೋರಾಟ ನಡೆಸಿದ ವ್ಯಕ್ತಿಗೆ 2007ರಲ್ಲಿ ಕನ್ನಡಪ್ರಭದ ವರ್ಷದ ವ್ಯಕ್ತಿಗೆ ಎಂದು ಗೌರವಿಸಿದೆ. ವಿಚಿತ್ರ ಎಂದರೆ ಕರ್ನಾಟಕದಲ್ಲಿದ್ದರೂ ಕನ್ನಡದವರು ನೀಡಿದ ಮೊದಲ ಸಮ್ಮಾನ ಇದೇ.
ಒಂದು ಘಟನೆ ಬೆಳಗಾವಿಯ ಹತ್ತಿರವೇ ಹುಲಿಯೂರು ಎಂಬ ಗ್ರಾಮ ಇದೆ. ಇಲ್ಲಿಯೂ ಬೇಡರೇ ಜನವಸತಿ ಹೆಚ್ಚು. ರಾಷ್ಟ್ರೀಯ ಹೆದ್ದಾರಿ ಮೇಲೆ ಇರುವ ಗ್ರಾಮದ ಹತ್ತಿರ ಒಂದು ದಿನ ಬಸ್ ನ್ನು ಯಾರೋ ದರೋಡೆ ಮಾಡುತ್ತಾರೆ. ಪೊಲೀಸ್ ವರದಿಗಳ ಪ್ರಕಾರ ದರೋಡೆಕೊರರು ಹಿಂದಿ ಮಾತನಾಡುತ್ತಿದ್ದರು. ವಾಸ್ತವವಾಗಿ ಹುಲಿಯೂರಿನ ಬೇಡರಿಗೆ ಹಿಂದಿಯ ಹಿಂದಿನ ಮತ್ತು ಮುಂದಿನ ಗಂಧಗಾಳಿ ಗೊತ್ತಿಲ್ಲ. ನಿಜ ಪರಿಸ್ಥಿತಿ ಅರಿತ ಡಾ. ಘಸ್ತಿ ಮಾಧ್ಯಮದವರ ನೆರವಿನಿಂದ ಇಡೀ ಪ್ರಕರಣವನ್ನು ಬೆಳಕಿಗೆ ತಂದು ದರೋಡೆಯಲ್ಲಿ ಹುಲಿಯೂರಿನ ಬೇಡರ ಕೈವಾಡ ಇಲ್ಲ ಎಂದು ಸಾಬೀತು ಪಡಿಸಿ. ವಿನಾಕಾರಣ ಪೊಲೀಸರ ಅತಿಥ್ಯ ಪಡೆಯುತ್ತಿದ್ದ ಹುಲಿಯೂರಿನ ಬೇಡರನ್ನು ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಸ್ವಾರ್ಥ ರಾಜಕಾರಣಿಗಳು ಮತ್ತು ಅವರ ದಲಾಲರು ಈ ಗ್ರಾಮಸ್ಥರಿಂದ ಹಣ ಪೀಕಿಸಿಕೊಂಡದ್ದೇ ಅಲ್ಲದೇ ಹುಲಿಯೂರಿನ ಬೇಡರ ಬಿಡುಗಡೆಗೆ ನಮ್ಮದೇ ಪ್ರಯತ್ನ. ಇದರಲ್ಲಿ ಘಸ್ತ್ಯಾನದ್ದೂ ಏನೂ ಇಲ್ಲ ಎಂದು ಬಿಂಬಿಸುತ್ತಾರೆ. ಇದೇ ಊರಿನ ಬೇಡರು ಘಸ್ತಿ ಮೇಲೆ ಹಲ್ಲೆ ಮಾಡುವುದಕ್ಕೆ ಪ್ರಯತ್ನಿಸಿ ಕೊನೆಗೆ ಖಾಜಿ ಸಂದಾನದಲ್ಲಿ ಪರಿಹಾರವಾಗುತ್ತದೆ. ಡಾ. ಘಸ್ತಿ ಅವರ ಇಡೀ ಜೀವನದ ಕುರಿತು ಇಲ್ಲಿ ಹೇಳಲಿಕ್ಕಾಗುವುದಿಲ್ಲ. ವಾಲ್ಮಿಕಿ ಓದಲೇ ಬೇಕಾದ ಪುಸ್ತಕ ಅಷ್ಟು ಮಾತ್ರ ಹೇಳಬಲ್ಲೆ.
ಲೋಡ್ ಆಗುತ್ತಿದೆ......