Welcome, Guest   [ Register | Sign In | Take a tour | Adult Filter: On ]

ಟಿಎನ್ನೆಎಸ್ಸ್ ಹೇಳಿದ ಗ್ರಾಮ ವೃದ್ಧಾಶ್ರಮ


ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಮುಕ್ತ ಮುಕ್ತ ಸಂವಾದ ಜರುಗಿತು. ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಿರುತೆರೆ ನಿರ್ದೇಶಕ ಟಿ.ಎನ್. ಸಿತಾರಾಮ್, ಹಳ್ಳಿಗಳು ಇಂದು ವೃದ್ಧಾಶ್ರಮಗಳು ಆಗುತ್ತಿವೆ ಎಂದು ಹೇಳಿದರು. ಅವರ ಮಾತಿನ ಹಿಂದೆ ಎಂತಹ ಸತ್ಯ ಅಡಗಿದೆ. ಎಲ್ಲ ಜಾಗತೀಕರಣದ ಪರಿಣಾಮವಾಗಿಯೋ ಅಥವಾ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸಮಸ್ಯೆ, ನಗರಗಳತ್ತ ಹೆಚ್ಚುತ್ತಿರುವ ಯುವಕರ ಆಕರ್ಷಣೆ ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಕೂಡಿಕೊಂಡು ಬೆಳೆದ ಒಂದು ಸಮಸ್ಯೆಯೇ ಗ್ರಾಮ ವೃದ್ಧಾಶ್ರಮ.

ಇದೇ ಸಮಸ್ಯಾ ಕಥೆ ಆಧಾರವಾಗಿಟ್ಟುಕೊಂಡು ಬಹುಶಃ ಸುವರ್ಣದಲ್ಲಿರಬೇಕು. ವೈಶಾಲಿ ಕಾಸರವಳ್ಳಿ ಪುತ್ರಿ ಗಿರಿಜಾ ಕಾಸರವಳ್ಳಿ ನಟಿಸಿದ ಚಿತ್ರ ಪ್ರಸಾರವಾಗಿತ್ತು. ಅದರಲ್ಲಿ ಗಿರಿಜಾ ಪತ್ರಕರ್ತೆ. ಒಂದು ಗ್ರಾಮದಲ್ಲಿನ ಅಧ್ಯಯನಕ್ಕೊ ಏನೋ ಸರಿಯಾಗಿ ನೆನಪಿಲ್ಲ. ಅಲ್ಲಿನ ವೃದ್ಧರ ಬದುಕು ಮತ್ತು ನಗರದತ್ತ ಯುವಕರ ವಲಸೆ ಕುರಿತು ವರದಿ ಮಾಡುತ್ತಾರೆ. ಆ ವರದಿಯ ಭೀಕರ ಪರಿಣಾಮ ಎನ್ನುವಂತೆ ಎರಡೇ ದಿನದಲ್ಲಿ ಅಲ್ಲೋಂದು ಕೊಲೆಯಾಗುತ್ತದೆ. ದರೋಡೆಯಾಗುತ್ತದೆ. ಹೀಗೆ ಗ್ರಾಮದಲ್ಲಿ ಒಂದು ಸುದ್ದಿಯ ಪರಿಣಾಮವಾಗಿ ಏನೆಲ್ಲ ಆಗಬಾರದು ಎಂದು ಸಹಜ ಮನುಷ್ಯ ಭಾವಿಸುತ್ತಾನೋ ಅದೇಲ್ಲವೂ ಘಟಿಸುತ್ತ ಹೋಗುತ್ತದೆ.

ಗ್ರಾಮೀಣ ಕ್ಷೇತ್ರ ಯಾಕೆ ಉದ್ಯೋಗಾವಕಾಶದಿಂದ ವಂಚಿತವಾಗುತ್ತಿದೆ. ಸೀಮಿತ ಅವಕಾಶಗಳು ಇಲ್ಲದ ಅಲ್ಲಿನವರ ಬದುಕು ಸಹನೀಯವಾಗುವಂತೆ ಮಾಡುವಲ್ಲಿ ನಾವು ಎಲ್ಲಿ ಎಡವುತ್ತಿದ್ದೇವೆ. ಮುಂದೊಂದು ದಿನ ಭವಿಷ್ಯತ್ತಿನಲ್ಲಿ ಹಳ್ಳಿಗಳಲ್ಲಿ generation gap ತಲೆಮಾರಿನ ಅಂತರ ಸೃಷ್ಟಿಯಾಗುವುದು ತಪ್ಪಬಹುದೇ. ಈಗಾಗಲೇ ಭಾರತದ ಕೃಷಿ ಕವಲು ದಾರಿಯಲ್ಲಿ, ಅಲ್ಲ, ಅವನತಿಯತ್ತ ಸಾಗುತ್ತಿದೆ. ಕೃಷಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆ ಇದೆ ಎಂದು ದಶಕದ ಹಿಂದೆ ಬೊಬ್ಬೆ ಹೊಡೆಯಲಾಗುತ್ತಿತ್ತು. ಇಂದು ಕೃಷಿ ಎಂದರೆ ರೈತಾಪಿ ವರ್ಗದ ಯುವಕರೇ ಮೂಗು ಮುರಿಯುತ್ತಿದ್ದಾರೆ. ಪರಿಣಾಮವಾಗಿ ಕೃಷಿ ಕ್ಷೇತ್ರದ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಆದರೇ ಸಮಸ್ಯೆಗಳು ಇನ್ನೊಂದು ರೂಪದಲ್ಲಿ ಜನ್ಮ ಪಡೆದಿವೆ. ಸರಿಯಾಗಿ ಬೆಳೆ ಇಲ್ಲ. ಬರಗಾಲ. ಈ ಬಾರಿ ದೇಶದ ಅರ್ಧ ಭಾಗ ಮಳೆಗಾಲದಲ್ಲಿ ಬರಗಾಲ ಎದುರಿಸುತ್ತಿದೆ. ಕುಲಾಂತರಿ ಬೀಜಗಳ ಹಾವಳಿಯಿಂದ ರೈತ ತತ್ತರಿಸಿ ಹೋಗಿದ್ದಾನೆ. ಸರ್ಕಾರ ನೀಡುವ ಸಾವಿರ ರೂಪಾಯಿ ಸಹಾಯಧನಕ್ಕೆ ಸಾವಿರ ಬಾರಿ ರೈತನಾದವ ತಾಲೂಕು ಕೇಂದ್ರಕ್ಕೆ ತಿರುಗಬೇಕಾಗಿದೆ. ಒಟ್ಟಿನಲ್ಲಿ ಹಳ್ಳಿ ಎಂದರೇ ಕೃಷಿ, ಕೃಷಿ ಎಂದರೆ ಹಳ್ಳಿ ಎನ್ನುವ ಪರಿಸ್ಥಿತಿ ಬದಲಾದಲ್ಲಿ ಮಾತ್ರ ಗ್ರಾಮ ವೃದ್ಧಾಶ್ರಮ ಸಮಸ್ಯೆಗೆ ಪರಿಹಾರ ದೊರೆಯಬಹುದು. ಕಣ್ಣಂಚಿನಲ್ಲಿಯಂತೂ ಈ ಪರಿಹಾರ ಕಾಣುತ್ತಿಲ್ಲ. ಎಕೆಂದರೇ ಇತರೇ ಕ್ಷೇತ್ರಗಳ ಉದ್ಯೋಗ ಸೃಷ್ಟಿಯಂತೂ ನಗರ ಕೇಂದ್ರಿಕೃತ.

ಹಕ್ಕು ನಿರಾಕರಣೆ