A friend Who knows all about but still likes you ಈ ಮಾತಿಗೆ ನನ್ನ ಮಟ್ಟಿಗೆ ಹೇಳುವುದಾದರೆ ನನಗಿರುವ ಪರಮಾಪ್ತ ಮಿತ್ರ ಎಂದರೆ ದೀಪಕ್. ನಿನ್ನ ಜೀವನದಲ್ಲಿ ಮಿತ್ರನಿಗೆ ಯಾವ ಸ್ಥಾನ? ದೇಹದ ಅರ್ಧ ಭಾಗ ಅರ್ಧಾಂಗಿಗೆ ಇನ್ನರ್ಧ ನನ್ನ ಮಿತ್ರೋತ್ತಮನಿಗೆ ಇದು ನಾನು ಯಾವಾಗಲೋ ವನಿಗೆ ಹೇಳಿದ್ದ ಮಾತು. ಅಂದಿನಿಂದಲೇ ಆತ ನನ್ನ ಸೆಕೆಂಡ್ ಪಾರ್ಟ್ ಆಗಿಬಿಟ್ಟ. ಇಂದು ನಾನು ಮನೆಯಲ್ಲಿ ಇಲ್ಲ. ಬದುಕು ಕಟ್ಟುವ ಧಾವಂತಕ್ಕೆ ಬಿದ್ದು ದೂರದಲ್ಲಿದ್ದೇನೆ ಆದರೂ ಅವನೊಂದಿಗೆ ಕಳೆದ ಡಿಗ್ರಿ ಕಾಲೇಜಿನ ದಿನಗಳನ್ನು ಮರೆಯಲಿಕ್ಕಾಗದು. ಒಂದೇ ಒಂದು ದಿನ ಬಿಟ್ಟಿರದ ನಾವಿಬ್ಬರು ಕಳೆದ ಎರಡು ವರ್ಷಗಳಿಂದ ದೂರದಲ್ಲಿದ್ದೇವೆ. ಆರು ತಿಂಗಳಿಗೊಮ್ಮೆ ಊರಿಗೆ ಹೋದರೂ ಕನಿಷ್ಟ ಎರಡು ದಿನಗಳಾದರೂ ಆತನೊಂದಿಗೆ ಇರಲೇಬೇಕು. ಮಾತುಗಳು ಖುಷಿಗಳು ನೋವುಗಳು ಎಲ್ಲ ಎರಡೇ ದಿನದಲ್ಲಿ ಕೊಯ್ನಾದಿಂದ ಕೃಷ್ಣೆ ಹರಿದು ಇಡೀ ಜಿಲ್ಲೆಯನ್ನ ಮುಳುಗಿಸಿದಂತೆ ಮುಳುಗಿಸಿ ಬಿಡುತ್ತದೆ ಆ ಮಾತುಗಳು. ಜೊತೆಗೊಂದು ಸಮುದ್ರಾದ ನಂಟು.
ನಮ್ಮಿಬ್ಬರ ಅಭಿರುಚಿ ಒಂದೇ ಎನ್ನವುದು ಗೊತ್ತಾಗಿದ್ದು ಆರ್‌ಪಿಡಿ ಕಾಲೇಜಿನ ಪ್ರಿನ್ಸಿಪಾಲ್ ಚೇಂಬರ್ ಎದುರು. ಜಿಟಿ ಜಿಟಿ ಮಳೆಯ ನಡುವೆ. ಇಂದು ಎಕನಾಮಿಕ್ಸ್ ಟೆಸ್ಟ್ ಏನೂ ಓದಿಲ್ಲ. ಗೋಣಗಾಟ ನಿಂತಿದ್ದವರ ನಡುವೆ ಶುರುವಾಗಿತ್ತು. ಜಾನ್ ಮೆನಾರ್ಡ್ ಕೇಯ್ನ್‌ನ ಥಿಯರಿ ಆಫ್ ಇಕ್ವಿಲಿಬ್ರಿಯಂ ಮೇಲೆ ಪ್ರಶ್ನೆ ಬರುತ್ತದೆ ಎಂದು ಏನಿಸಿದ್ದು ಸರಿಯಾಗಿತ್ತು. ಹಾಗಂದರೆ ಏನು? ಜೋಕ್ ಮಾಡುತ್ತ ಪಡ್ಡೆ ಉದಾಹರಣೆ ನೀಡಿದ್ದೆ ನಮ್ಮಿಬ್ಬರ ದೋಸ್ತಿ ಚಿಗುರಲು ಕಾರಣವಾಯಿತು.ಇಂದದೂ ಹೆಮ್ಮರವಾಗಿ ಬೆಳೆದಿದೆ.
ನಮ್ಮಿಬ್ಬರ ದೋಸ್ತಿ ಕಿತಾಪತಿಯ ಪ್ರಹಸನ ಇನ್ನೊಂದಿದೆ ಮರೆಯಲಾಗದ್ದು. ಜಗಲ್‌ಪೇಟ್‌ದಿಂದ ದಾಂಡೇಲಿಗೆ ಹೀರೋ ಹೊಂಡಾ ಮೇಲೆ ಹೊರಟಿದ್ದೇವು. ಆಗಿನ್ನೂ ನನಗೆ ಬೈಕ್ ಬರುತ್ತಿರಲಿಲ್ಲ. ಕಿರಿದಾದ ರಸ್ತೆಯಲ್ಲಿ ನಮ್ಮ ಸವಾರಿ ಹೊರಟಿತ್ತು. ಸ್ವಲ್ಪ ದೂರ ಹೋದ ಮೇಲೆ ಹಾದಿಯ ತುಂಬ ಘನ ಗಂಬೀರವಾಗಿ ಎಮ್ಮೆಗಳು ಹೊರಟಿದ್ದವು. ಇದ್ದುದರಲ್ಲೇ ಹ್ಯಾಗೋ ಬ್ಯಾಲೆನ್ಸ್ ಮಾಡಿಕೊಂಡು ನಮ್ಮ ಎಮ್ಮೆ ಓವರ್ ಟೇಕ್ ನಡೆದಿತ್ತು. ಹಿಂದೆ ಕುಳಿತಿದ್ದ ನಾನು ಸುಮ್ಮನೇ ಕುಳಿತುಕೊಳ್ಳದೇ ಪಕ್ಕದಲ್ಲಿದ್ದ ಎಮ್ಮೆಗೆ ಜಾಡಿಸಿ ಒದ್ದೆ. ಒದ್ದದ್ದಷ್ಟೆ ಡಮಾರ್ ಎಂದು ಹಳ್ಳಕ್ಕೆ ನಮ್ಮ ಸವಾರಿ ಬಿತ್ತು. ಅಯ್ಯೊ ನನ್ನ ಕಾಲ ಅಂತ ಆಂವ. ಅಯ್ಯೊ ನನ್ನ ಸೊಂಟ ಅಂತ ನಾನು. ಹೆಡ್ ಲೈಟ್ ಬುಕನಾ... ಆಗಿದ್ದಿಷ್ಟೇ ನಾನು ಒದ್ದ ಎಮ್ಮೆ ಅಡ್ಡ ತಲೆ ಹಾಕಿದ್ದಕ್ಕೆ ಗಾಡಿ ಬ್ಯಾಲೆನ್ಸ್ ತಪ್ಪಿತ್ತು. ಅದೇ ಕಿತಾಪತಿಯಿಂದಾಗಿ ಸೊಂಟ ಉಳುಕಿಸಿಕೊಂಡಿದ್ದು.
ಹೀಗಿದೆ ನಮ್ಮಿಬ್ಬರ ದೋಸ್ತಿಯ ಕಿತಾಪತಿಗಳು..
ಆ ಸವಿ ನೆನಪುಗಳ ಗುಂಗಿನಲ್ಲಿ
ಹರಿಯುತಿದೆ ಜೀವನ ರಸ...
ಮೊಗೆ ಮೊಗೆದು ಅನುಭವಿಸುತಿರುವೆ
ನೀನಿಲ್ಲದ ಚಣಗಳಲಿ...
ತೀರದು ಎಂದಿಗೂ ಈ ಗೆಳೆತನ
ನೆನಪಿನ ಬಾಳ ಬುತ್ತಿ ಖಾಲಿಯಾಗಿದೆಯೇ
ಮೊಗೆ ಮೊಗೆದು ನೀಡುವೆ....
ಬಾಳ ಬುತ್ತಿಯ ಚಣಗಳನು...

ಲೋಡ್ ಆಗುತ್ತಿದೆ......