ಕೆಂಪು ಕೋಟೆಯಲ್ಲಿ ಬಿಟ್ಟ ಬಿರುಕು
ಇತ್ತೀಚೆಗೆ ಅಂದರೆ ಮೇ ತಿಂಗಳ ಕೊನೆಯ ವಾರದಲ್ಲಿ ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪರಿಣಾಮಗಳು ಯಾಕೆ ಮಾಧ್ಯಮಗಳ ಗಮಜ್ನ ಸೆಳೆಯಲಿಲ್ಲವೊ ಗೊತ್ತಿಲ್ಲ. ಆದರೂ ಈ ಸ್ಥಳೀಯ ಸಂಸ್ಥೆ ಚುನಾವಣೆಗಳು ನೀಡಿದ ತೀರ್ಪನ್ನು ರಾಜಕೀಯ ಸೇರಿದಂತೆ ಮಾಧ್ಯಮ ಪಂಡಿತರು ಗಮನಿಸಿದ್ದರೆ ಜನರ ನಾಡಿ ಮಿಡಿತ ಏನು ಅನ್ನುವುದು ಅರ್ಥವಾಗಬಹುದಿತ್ತು.
ಸರಾಸರಿ ಮೂರು ದಶಕಗಳ ಕಾಲ ಎಡ ಪಂಥಿಯರ ಕೈಯಲ್ಲಿ ಉಳಿದ ಅಧಿಕಾರ ಈ ಬಾರಿ ಕಾಂಗ್ರೆಸ್ ಮತ್ತು ತೃಣಮೂಲದವರತ್ತ ಸಾಗಿದೆ. ಜ್ಯೋತಿ ಬಸು ಇರುವವರೆಗೆ ಒಂದೇ ಒಂದು ಸ್ಥಾನ ಗೆದ್ದುಕೊಳ್ಳಲು ಹರಸಾಹಸ ಪಡಬೇಕಿದ್ದ ಈ ಪಕ್ಷಗಳು ಇಂದು ಮಿಡ್ನಾಪೂರ್, ಉತ್ತರ ಮತ್ತು ದಕ್ಷಿಣ 24 ಪರಗಣಾ ಜಿಲ್ಲೆಗಳು ಸೇರಿದಂತೆ 13 ಜಿಲ್ಲೆಗಳಲ್ಲಿ ಮೇಲುಗೈ ಸಾಧಿಸಿವೆ. ಎಡಪಂಥಿಯರ ಕೈಗೆ ಪೂರ್ವ ಮಿಡ್ನಾಪೂರ ಜಿಲ್ಲಾ ಪಂಚಾಯತ್ ಅಧಿಕಾರ ಮಾತ್ರ ದಕ್ಕಿದೆ. ಉಳಿದ 12 ಜಿಲ್ಲೆಗಳು ಇಂದು ಹೆಚ್ಚಾಗಿ ತೃಣಮೂಲದ ಹಿಡಿತದಲ್ಲಿ ಸಿಲುಕಿವೆ.
ಮೂರು ದಶಕಗಳಿಂದ ಕಾಣದ ಬದಲಾವಣೆಯು ಕೇವಲ ಐದು ವರ್ಷಗಳಲ್ಲಿ ಹೇಗೆ ಬಂದಿತು? ಇದು ಯಕ್ಷ ಪ್ರಶ್ನೆಯೂ ಅಲ್ಲ. ಬದಲಾವಣೆಗೆ ನೇರವಾಗಿ ಕಾರಣವಾಗಿದ್ದು ಬುದ್ಧದೇವ್ ಸರಕಾರ. ಔದ್ಯಮಿಕರಣದ ಭರದಲ್ಲಿ ಹೂಗ್ಲಿ ನದಿ ದಂಡೆಯಲ್ಲಿನ 43, 639 ಎಕರೆ ಜಮೀನನ್ನು ರೈತರಿಂದ ಸ್ವಾಧೀನ ಪಡಿಸಿಕೊಳ್ಳಲು ನಡೆಸಿದ ಪ್ರಯತ್ನ. 43 ಸಾವಿರಕ್ಕೂ ಹೆಚ್ಚು ಎಕರೆ ಕೃಷಿ ಜಮೀನನ್ನು ಒಂದೇ ಸ್ಥಳದಿಂದ ವಶಪಡಿಸಿಕೊಳ್ಳುವ ಪ್ರಯತ್ನವೂ ಇದಾಗಿರಲಿಲ್ಲ. ನಂದಿಗ್ರಾಮ, ಸಿಂಗೂರ್, ಉತ್ತರ ಮತ್ತು ದಕ್ಷಿಣ ಪರಗಣಾ ಅಲ್ಲದೇ ಪೂರ್ವ ಮಿಡ್ನಾಪೂರ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಫಲವತ್ತಾದ ಭೂಮಿಯನ್ನು ಒತ್ತಾಯ ಪೂರ್ವಕವಾಗಿ ವಶಪಡಿಸಿಕೊಂಡಿದ್ದೇ ನಂದಿಗ್ರಾಮದಲ್ಲಿನ ರೈತರ ಅಕ್ರೋಶಕ್ಕೆ ಕಾರಣವಾಗಿ ರಾಷ್ಟ್ರದ ಗಮನ ಸೆಳೆದದ್ದು ಅಲ್ಲದೇ ಎಡಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಣ್ಣು ಮುಕ್ಕುವುದಕ್ಕೂ ಕಾರಣವಾಯಿತು. ಒಂದಂಶ ಇಲ್ಲಿ ಸ್ಪಷ್ಟವಾಗಿದೆ. ಒತ್ತಾಯದ ರಾಜಕೀಯ ದಬ್ಬಾಳಿಕೆಯನ್ನು ಜನರು ಒಂದು ಹಂತದವರೆಗೆ ಸೈರಿಸಬಹುದು. ಅಸ್ತಿತ್ವದ ಪ್ರಶ್ನೆ ಎದುರಾದಲ್ಲಿ ಇಲಿಯೂ ಹುಲಿಯಾಗಿ ನಿಲ್ಲುತ್ತದೆ ಎನ್ನುವುದಕ್ಕೆ ನಂದಿಗ್ರಾಮದಲ್ಲಿ ಬಡ ರೈತರ ಹೋರಾಟವೇ ಉದಾಹರಣೆ.
ಭೂಸ್ವಾಧೀನ ಆಗುವುದಿಲ್ಲ ಎಂದು ತಿಳಿದಾಕ್ಷಣ ತೆಪ್ಪಗೆ ಇದ್ದಿದ್ದರೆ ಇಂದು ಕೆಂಪು ಕೋಟೆಯಲ್ಲಿ ಬಿರುಕು ಕಾಣುತ್ತಿರಲಿಲ್ಲವೇನೊ? ಪರಿಸ್ಥಿತಿ ಹಾಗಿರಲಿಲ್ಲ. ಮೂರು ದಶಕಗಳ ಅಧಿಕಾರದ ಮದದಲ್ಲಿ ಮೆರೆದ ಎಡಪಕ್ಷದವರು, ರೈತರ ಮೇಲೆ ಏರಿ ಹೋಗಿ ರಕ್ತದ ಕೋಡಿ ಹರಿಸಿದ್ದು, ಪ್ರಜಾತಂತ್ರದ ಅತಿ ದೊಡ್ಡ ಅಣುಕು.ಎಡದ ನಾಯಕರೇ ಒಪ್ಪಿಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳಲ್ಲಿ ನಾವು ಸೋಲು ಅನುಭವಿಸಲು ಕಾರಣವಾಗಿದ್ದು ಎರಡೇ ಅಂಶಗಳು ಒಂದು ಸಲೀಂ ಗ್ರುಪ್ ಇನ್ನೊಂದು ನಂದಿಗ್ರಾಮದ ವಿಶೇಷ ಆರ್ಥಿಕ ವಲಯದ ಯೋಜನೆ. ವಿವಿದ ಔದ್ಯಮಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪಶ್ಚಿಮ ಬಂಗಾಳ ಸರಕಾರ ವಶಪಡಿಸಿಕೊಂಡ 43 ಸಾವಿರ ಎಕರೆ ಜಮೀನಿನಲ್ಲಿ ಸಲೀಂ ಗ್ರುಪ್ ಎನ್ನುವ ಸಂಸ್ಥೆಗೆ ನೀಡಿದ್ದು ಬರೋಬ್ಬರಿ 11650 ಎಕರೆ ಜಮೀನು, ಇದರಲ್ಲಿ ನಗರ ನಿರ್ಮಾಣಕ್ಕೆಂದು 25 ಸಾವಿರ ಎಕರೆ ಜಮೀನು ನೀಡುವ ಉದ್ದೇಶವಿತ್ತು. ಟಾಟಾ ಮೊಟರ್ಸ್‌ಗೆ 997 ಎಕರೆ ಜಮೀನನ್ನು ಸಿಂಗೂರ್ ಬಳಿ ನೀಡಲಾಗಿದೆ. ಸಮಾಜವಾದ, ಸಮತಾವಾದ ಎಂದು ಬಾಯಿ ಬಾಯಿ ಬಡಿದುಕೊಳ್ಳುವ ಇದೇ ಎಡ ಪಕ್ಷಗಳು ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕಾ ವಲಯ ಸ್ಧಾಪನೆಗೆ ನೀಡಿದ್ದು ಕೇವಲ 400 ಎಕರೆ. ಅಂದರೆ ಹೇಳುವುದಕ್ಕೆ ಆಚಾರ ತಿನ್ನುವುದಕ್ಕೆ....ಬದನೆಕಾಯಿ ಅಲ್ಲವೆ ?
ಎಪ್ಪತ್ತರ ದಶಕದಲ್ಲಿ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದ ಮಾಲೀಕತ್ವದ ಹಕ್ಕಿಗೆ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರಕಾರ ತಿದ್ದು ಪಡಿ ತಂದ ಸಂದರ್ಭದಲ್ಲಿ ಉಳುವವನೆ ಭೂಮಿಯ ಒಡೆಯ ಮಸೂದೆಗೆ ತೀವ್ರ ಪ್ರತಿಭಟನೆ ಮೊದಲು ವ್ಯಕ್ತವಾಗಿದ್ದು ಪಶ್ಚಿಮ ಬಂಗಾಳದಲ್ಲಿ. ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿ ಅಲ್ಲಿಯೇ ಉಳುವವನೆ ಭೂಮಿಯ ಮಾಲೀಕನಾಗುವುದು ಸರಿ. ಆದರೆ ಮೂಲ ಮಾಲೀಕನಿಗೆ ಸರಕಾರ ಪರಿಹಾರ ನೀಡುವುದು ಕರ್ತವ್ಯ ಎಂದು ತೀರ್ಪು ಹೊರ ಬಿದ್ದಿತು. ಈಗ ಅದೇ ತೆರನಾದ ಆದರೆ ಸ್ವಲ್ಪ ಬದಲಾವಣೆಯ ಪರಿಸ್ಥಿತಿ ಇದೆ. ಭೂಮಿ ಜೀವನಾಧಾರವಾಗಿದ್ದರೂ ಬಹು ಜನರ ಬೇಡಿಕೆ (ಇದು ಸಂಶಯ ಅಥವಾ ಸರಕಾರದ ಒತ್ತಾಸೆ) ತನ್ನ ಜೀವನಾಧಾರವನ್ನೇ ಕಳೆದುಕೊಳ್ಳುವ ಕೃಷಿಕನಿಗೆ ಪರಿಹಾರ ದೊರೆಯುತ್ತದೆ ಆದರೂ ಅದು ಶಾಶ್ವತವಾಗಿಲ್ಲ. ಎಲ್ಲವೂ ಅತಂತ್ರವೇ ಇದೇ ಪರಿಸ್ಥಿತಿ ಇಂದು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರ ಪರಿಸ್ಥಿತಿಯು ಇದೇ ಆಗಿದೆ.

ಲೋಡ್ ಆಗುತ್ತಿದೆ......