ಸೈದ್ಧಾಂತಿಕ ಸೋಲುಗಳೇ?
ಕೆಲವು ದಿನಗಳ ಹಿಂದೆ ದಿನೇಶ್ ಅಮೀನ್ ಮಟ್ಟೂ ಅವರು ಮಹಾರಾಷ್ಟ್ರದಲ್ಲಿನ ದಲಿತ ರಾಜಕೀಯದ ಪರಿಸ್ಥಿತಿ ಕುರಿತು ಬರೆದ ವಿಶ್ಲೇಷಣಾತ್ಮಕ ಲೇಖನವನ್ನು ಓದಿದ ನಂತರವೇ ಅನ್ನಿಸಿದ್ದು. ಭಾರತದಲ್ಲಿ ಎಷ್ಟೊಂದು ಸೈದ್ಧಾಂತಿಕ ಸೋಲುಗಳು ಪದೆಪದೆ ಪುನರಾವರ್ತನೆಯಾಗುತ್ತಿವೆಯೋ ಅಥವಾ ವಿಕಸನವಾದದಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿಯೊ ಎನ್ನುವುದು ಗೊಂದಲದ ಗೂಡಾಗಿದೆ.
ಕರ್ನಾಟಕದ ಮಟ್ಚಿಗೆ ಹೇಳಬೇಕಾದಲ್ಲಿ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳು ಬದಲಾವಣೆಯಾಗುತ್ತಲೆ ಸಾಗಿವೆ. ಸಾಮಾಜೀಕ ಕ್ರಾಂತಿ ನಾಂದಿ ಹಾಡಿದ ಬಸವಣ್ಣನವರ ಅನುಯಾಯಿಗಳು ಇಂದು ತಮ್ಮದೇ ಒಂದು ಸ್ವತಂತ್ರ ಧರ್ಮ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಸಾಗಿದೆ. ಹೀಗಾದಲ್ಲಿ ಸಾಮಾಜೀಕ ಕ್ರಾಂತಿ ಸಮಾನತೆ ಎಂದು ವಚನ ಸಾಹಿತ್ಯ ಮತ್ತು ನಡೆ ನುಡಿಯ ಮೂಲಕವೇ ಹೇಳಿದ ಬಸವಣ್ಣನವರ ತತ್ವಗಳು ಇಂದು ಕೇವಲ ಒಂದು ವರ್ಗಕ್ಕೆ ಸಿಮೀತವಾಗಲು ಕಾರಣ ಯಾರು? ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ.
ಜ್ಞಾನವಿದ್ದವರು ಜ್ಞಾನವಿಲ್ಲದವರನ್ನು ಹತ್ತಿರ ಸೇರಿಸಿಕೊಳ್ಳದೇ ಹೋದಲ್ಲಿ ಆಗುವ ಅನಾಹುತವೇ ಬಸವಣ್ಣನವರ ಸಾಮಾಜೀಕ ಸಮಾನತೆಯ ತತ್ವಗಳಿಗೆ ಆಗಿದೆ. ಬಸವಣ್ಣನ ಅಂದು ನೀಡಿದ ತತ್ವ ಜೀವನ ಸಿದ್ಧಾಂತಗಳನ್ನು ಶತ ಶತಮಾನಗಳಿಂದ ಪಾಲಿಸಿಕೊಂಡು ಬರುತ್ತಿರುವವರಲ್ಲಿ ಎಷ್ಟು ಜನ ಇವನಾರು ಇವನಾರು ಎಂದೆನಿಸಬೇಡ ಇವ ನಮ್ಮವ ಎನ್ನುವ ತತ್ವಕ್ಕೆ ಅಂಟಿಕೊಂಡಿದ್ದಾರೆ. ತಮ್ಮದೇ ಒಂದು ಅನನ್ಯತೆಯನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಧಾರ್ಮಿಕ ರೀತಿ ರಿವಾಜುಗಳು ಬಸವಾನುಯಾಯಿಗಳು ಅಲ್ಲದವರಿಗೆ ಪರಕಿಯತೆಯ ಭಾವನೆಯನ್ನು ತರುತ್ತಿವೆ. ಓ ಇದು ನಮ್ಮದಲ್ಲ ಬಸವಾನುಯಾಯಿಗಳು ಆಗಬೇಕಾದರೇ ಹೀಗಿರಬೇಕು ಹಾಗಿರಬೇಕು ಎನ್ನುವುದು ಇಂದು ಮುಖ್ಯವಾಗಿ ಬಿಟ್ಟಿದೆ.
ಲಿಂಗ ಧಾರಣೆಯ ಅಥವಾ ಲಿಂಗ ದಿಕ್ಷೆ ಕುರಿತು ನಾನು ಚಿಕ್ಕವನಿದ್ದ ಸಂದರ್ಭದಲ್ಲಿ ಶ್ರಾವಣ ಮಾಸದ ಪುರಾಣ ಪಠಣದ ಸಂದರ್ಭದಲ್ಲಿ ಕೇಳಿದ ಒಂದು ಕಥೆ ನೆನಪಾಗುತ್ತಿದೆ ಅದೊಂದು ಇಲ್ಲಿ ಸಾಂದರ್ಭಿಕ ಕಥೆಯಾಗಬಹುದು. ಸರಿ... ಕಳ್ಳನೊಬ್ಬ ಶರಣನ ರೂಪದಲ್ಲಿ ಬಸವಣ್ಣನವರ ಮನೆಯನ್ನು ಪ್ರವೇಶಿಸುತ್ತಾನೆ. ಬಸವಣ್ಣ ಮತ್ತು ಬಸವಣ್ಣನವರ ಪತ್ನಿ ಗಂಗಾಬಿಕೆ ಮಲಗಿರುವ ಸಂದರ್ಭ ಉಪಯೋಗಿಸಿ, ಕಳ್ಳತನಕ್ಕೆ ಇಳಿಯುತ್ತಾನೆ. ಕಳ್ಳತನ ಮಾಡುವ ಸಂದರ್ಭದಲ್ಲಿ ಬಸವಣ್ಣನವರಿಗೆ ಎಚ್ಚರವಾಗುತ್ತದೆ. ಯಾರಪ್ಪ ನೀನು ಎಂದು ಸಹಜವಾಗಿ ಸೌಮ್ಯ ದ್ವನಿಯಲ್ಲಿ ಕೇಳುತ್ತಾರೆ. ನಾನು ಕಳ್ಳ ಎಂದು ಅವನು ಹೇಳುತ್ತಾನೆ. ಹಾಗಿದ್ದರೆ ನೀನು ಲಿಂಗ ಧಾರಣೆ ಮಾಡಿರುವಿಯಲ್ಲ ನೀನು ಶರಣ ಎಂದು ಬಸವಣ್ಣ ಕೇಳಿದ ಪ್ರಶ್ನೆಗೆ, ಇದು ಲಿಂಗವಲ್ಲ ನಿಮ್ಮನ್ನು ಮೋಸಗೊಳಿಸಲು ಲಿಂಬೆ ಹಣ್ಣನ್ನು ಬಟ್ಟೆಯಲ್ಲಿ ಕಟ್ಟಿ ಲಿಂಗದಂತೆ ಧರಿಸಿ ನಿಮ್ಮ ಪ್ರವೇಶಿಸಿದ್ದೇನೆ ಎಂದು ಹೇಳುತ್ತಾನೆ ಅದಕ್ಕೆ ಅವರು ನೀನು ಧರಿಸಿದ್ದು ಲಿಂಬೆ ಹಣ್ಣು ಆಗಿದ್ದರೂ ನಿನ್ನ ಮನಸ್ಸಲ್ಲಿ ಇರುವುದು ಲಿಂಗ ಧಾರಣೆಯಲ್ಲವೇ ಹೀಗಾಗಿ ಅದು ಶಿವಲಿಂಗವೇ ಎಂದು ಬಸವಣ್ಣ ಹೇಳುತ್ತಾರೆ.
ಇದು ಸತ್ಯ ಕಥೆಯೊ, ಕಟ್ಟು ಕಥೆಯೊ ಗೊತ್ತಿಲ್ಲ. ಆದರೆ ದೃಷ್ಟಾಂತ ಇಷ್ಟೆ ಲಿಂಗ ಧಾರಣೆ, ಲಿಂಗ ದೀಕ್ಷೆ, ಬ್ರಾಹ್ಮಣರ ಉಪನಯನ ಮುಂತಾದ ಸಂಪ್ರದಾಯಗಳು ಕೇವಲ ನೇಪ ಮಾತ್ರ ಅಷ್ಟೆ. ಅದು ಆಯಾ ವ್ಯಕ್ತಿಯ ಹೊಸ ಜೀವನದ ಆದಿ. ಆದರೆ ಇಂದು ಅದೆ ಆದಿ ಮುಖ್ಯವಾಗಿದೆ. ಲಿಂಗ ಧಾರಣೆ, ಉಪನಯನದ ಹಿಂದಿರುವ ಉದ್ದೀಶ್ಯ ಪೂರ್ಣವಾಗಿ ಮಾಯವಾಗಿದೆ. ಎಲ್ಲಿ ಎಂದು ಗೊತ್ತಿಲ್ಲ. ಹುಡುಕಬೇಕಾದವರು ನಾವೇ ಅಲ್ಲವೇ? ಎಕೆಂದರೆ ಕಳೆದವರು ನಾವು. ಅವರು ಕೊಟ್ಟಿದ್ದು ನಾವು ಕಳೆದಿದ್ದು.

ಲೋಡ್ ಆಗುತ್ತಿದೆ......