ಚೆಸ್ಚರ್ ಲೆ ಸ್ಟ್ರೀಟ್ ಕ್ರಿಕೆಟ್ ಮೈದಾನದಲ್ಲಿ ಸ್ಕಾಟ್ ಸ್ಟೈರಿಸ್ ಎರಡು ಬಾರಿ ಏನು ಮಾಡಬೇಕು ಎಂದು ಅರಿಯದೇ ನಿಲ್ಲಬೇಕಾಯಿತು. ಜೊತೆಗೆ ಇಡೀ ಕ್ರಿಕೆಟ್ ಜಗತ್ತೆ ನಿಬ್ಬೇರಗಾಗಿ ನಿಲ್ಲುವಂತಹ ಪರಿಸ್ಥಿತಿ. ಆದರೂ ಆ ಕ್ಷಣ ಬ್ಯಾಟ್ಸ್‌ಮನ್‌ನತ್ತ ಮೆಚ್ಚುಗೆಯ ದೃಷ್ಟಿ ಹರಿಸಲೇ ಬೇಕಾಯಿತು. ಕ್ರಿಕೆಟ್ ಜಗತ್ತಿನ ಶ್ರೇಷ್ಟರ ಕಲ್ಪನೆಗೂ ಸಿಗದ ರೀತಿಯಲ್ಲಿ ಕೆವಿನ್ ಪೀಟರ್ಸನ್ ಎಂಬ ದಕ್ಷಿಣ ಆಫ್ರಿಕ ಮೂಲದ ಈಗ ಇಂಗ್ಲೆಂಡ್ ಪರ ಆಡುತ್ತಿರುವ ಬ್ಯಾಟ್ಸ್‌ಮನ್ ಅಂತಹದೊಂದು ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದರು. ಆ ಎರಡು ರಿವರ್ಸ್ ಸ್ವೀಪ್ ಸಿಕ್ಸರ್‌ಗಳು ಶತ ಶತಮಾನಗಳಿಂದ ಜಾರಿಯಲ್ಲಿ ಇರುವ ಕ್ರಿಕೆಟ್‌ನ ಮೂಲ ನಿಯಮಗಳನ್ನೇ ಅಲ್ಲಾಡಿಸುತ್ತವೆ ಎಂದು ಆ ಕ್ಷಣದಲ್ಲಿ ವಿಚಾರ ಮಾಡಿರಲಿಕ್ಕಿಲ್ಲ. ಹಾಗಿದ್ದರೆ ಕೆವಿನ್ ಪ್ರಯೋಗಿಸಿದ ಆ ಎರಡು ರಿವರ್ಸ್ ಸಿಕ್ಸರ್‌ಗಳು ಏನು? ಇದು ಸರಿಯಾ ?
ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯವನ್ನು ವೀಕ್ಷಿಸಿದ್ದಲ್ಲಿ ಇಲ್ಲಿನ ವಿವರಣೆ ಅನವಶ್ಯಕ. ದೂರದಿಂದ ರನ್ ಅಪ್ ತೆಗೆದುಕೊಂಡು ಸ್ಕಾಟ್ ಸ್ಟೈರಿಸ್ ಬರುತ್ತಿದ್ದಾನೆ ವೇಗದ ಬೌಲರ್ ಸಾಮಾನ್ಯವಾಗಿ ರನ್ ಅಪ್ ತೆಗೆದುಕೊಳ್ಳುವುದು ಸಹಜ. ಶೋಯಬ್ ತನ್ನ ಪ್ರಾರಂಭದ ದಿನಗಳಲ್ಲಿ ಬೌಂಡರಿ ಲೈನ್ ಸಮೀಪ ರನ್ ಅಪ್ ತೆಗೆದುಕೊಳ್ಳುತ್ತಿದ್ದ. ಎಡ ಬದಿ ನಿಂತಿದ್ದ ಕೆವಿನ್ ಪೀಟರ್ಸನ್ ಒಮ್ಮೆಲೆ (ಮಂಗನಂತೆ) ಬಲ ಬದಿಗೆ ಹಾರಿ ಎದುರಿಗೆ ಬಿದ್ದ ಚೆಂಡನ್ನು ಹಿಗ್ಗಾಮುಗ್ಗಾ ಹೊಡೆಯದೇ ಉಲ್ಟಾ ಕಸಬರಿಗೆ ಹೊಡೆಯುತ್ತಾನೆ.
ಖಂಡಿತವಾಗಿ ಅಲ್ಲಿ ಫೀಲ್ಡರು ಇರಲು ಸಾಧ್ಯವೇ ಇಲ್ಲ. ಎಕೆಂದರೆ ಕೆವಿನ್ ಪೀಟರ್ಸನ್ ಎಡಗೈ ಬ್ಯಾಟ್ಸ್‌ಮನ್. ಹೀಗಾಗಿ ಇದ್ದ ಬಿದ್ದ ಫೀಲ್ಡಿಂಗ್ ಬಲವನ್ನು ವೆಟ್ಟೊರಿ ಅವನ ವಿರುದ್ಧ ದಿಕ್ಕಿನಲ್ಲಿ ನಿಲ್ಲಿಸಿರುತ್ತಾನೆ. ಛೆ ಹ್ಯಾಗೆ ಅದನ್ನ ಹೇಳೊದು ತಿಳಿತಾ ಇಲ್ಲ. ಒಟ್ಟಿನಲ್ಲಿ ಕೆವಿನ್ ಮಂಗನಂತೆ ಬಲಬದಿಗೆ ಹಾರಿದ್ದಕ್ಕೆ ಎದುರಾಳಿ ಫೀಲ್ಡರುಗಳು ಅವನ ಹಿಂದೆ ಬಂದಿರುತ್ತಾರೆ ಇರುವ ಒಂದೇರಡು ಫೀಲ್ಡರುಗಳು ಬೌಂಡರಿ ಲೈನ್‌ನಲ್ಲಿ ನೊಣ ಹೊಡೆಯುತ್ತಿರುತ್ತಾರೆ. ಹೋಗಲಿ ವಿಕೆಟ್ ಕೀಪರ್ ಪರಿಸ್ಥಿತಿ ಏನಾಗಿರಬೇಡ ಚೆಂಡು ಎತ್ತ ಬರುತ್ತಿದೆ ಎನ್ನುವುದು ಕಾಣದೆ ಕಕ್ಕಾಬಿಕ್ಕಿಯಾಗಿರುತ್ತಾನೆ. ಸಾಕಪ್ಪಾ ಇದು... ಫೀಲ್ಡಿಂಗ್ ಪೊಜಿಷನ್ನು. ಪೀಟರ್ಸನ್ ಆ ಕಡೆಯಿಂದ ಈ ಕಡೆ ಹಾರಿದ್ದು.
ಗಂಭೀರವಾಗಿ ಕ್ರಿಕೆಟ್ ಹುಚ್ಚರು ಅಲ್ಲಲ್ಲ ಪ್ರೇಮಿಗಳು ವಿಚಾರ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಪೀಟರ್ಸನ್ ಆ ರೀತಿ ಶಫ್ಲಿಂಗ್ ಮಾಡಬಹುದಾದರೆ ಬೌಲರುಗಳು ಯಾಕೆ ಎಡಗೈನಿಂದ ಬಲಗೈ, ಬಲಗೈನಿಂದ ಎಡಗೈಗೆ ಬೌಲ್ ಬದಲಿಸುತ್ತಾ ಬೌಲಿಂಗ್ ಯಾಕೆ ಮಾಡಬಾರದು ಎನ್ನುತ್ತಿರಾ? ಅದು ಸಾಧ್ಯವೇ ಇಲ್ಲ. ಹಾಗೇ ಏನಾದರೂ ಕಿತಾಪತಿ ಮಾಡಬೇಕು ಎಂದರೆ ಅಂಪೈರ್ ಪರ್ಮಿಷನ್ ಬೇಕು. ನೋಡಿ ಸ್ವಾಮಿ ನಾನು ಇದುವರೆಗೆ ಎಡಗೈ ಬೌಲಿಂಗ್ ಮಾಡುತ್ತಿದ್ದೆ. ಈಗ ಬಲಗೈ ಬೌಲಿಂಗ್ ಮಾಡುತ್ತೇನೆ ಎಂದು. ಆಗ ಅಂಪೈರ್ ಈ ಬೌಲರ್ ಬಲಗೈನಿಂದ ಬೌಲಿಂಗ್ ಮಾಡಲಿದ್ದಾನೆ ಎಂದು ಘೋಷಿಸುತ್ತಾನೆ. ಇದು ಬ್ಯಾಟ್ಸ್‌ಮನ್‌ಗೂ ಗೊತ್ತಾಗುತ್ತದೆ. ನಂತರ ಬ್ಯಾಟ್ಸ್‌ಮನ್ ಕೈಯಲ್ಲಿ ಕೋಲು ಅಲ್ಲಲ್ಲ ಬ್ಯಾಟ್ ಕೊಟ್ಟು ಹೊಡೆಸಿಕೊಂಡ ಹಾಗೆ ಆಗುತ್ತದೆ. ಆದರೆ ಅದೇ ನಿಯಮ ಪೀಟರ್ಸನ್ ಎಂಬ ಬ್ಯಾಟ್ಸ್‌ಮನ್ ಮಾಡುವ ಶಫ್ಲಿಂಗ್‌ಗೆ ಅನ್ವಯವಾಗುವುದಿಲ್ಲ. ಇದು ನ್ಯಾಯ ಸ್ವಾಮಿ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ...
ಪೀಟರ್ಸನ್ ಮಾಡಿದ ಮಂಗಾಟ ಎಂದು ಹೇಳುವುದೇ ಸೂಕ್ತ. ಇದರಿಂದ ಕ್ರಿಕೆಟ್ ಜಗತ್ತಿನಲ್ಲಿ ಶತ ಶತಮಾನಗಳಿಂದ ಅನುಚಾನವಾಗಿ ಜಾರಿಯಲ್ಲಿ ಇದ್ದ ಕೆಲ ನಿಯಮಗಳು ಗಾಳಿಗೆ ಬೂಸಾ ಹಾರಿದಂತೆ ಹಾರಿ ಹೋಗಿವೆ. ಈ ಕುರಿತು ಹೆಚ್ಚಿನ ಮಾಹಿತಿಯೊಂದಿಗೆ ಮುಂದಿನ ಲೇಖನದಲ್ಲಿ ಓದಿಸುತ್ತೇನೆ.

ಲೋಡ್ ಆಗುತ್ತಿದೆ......