ದಕ್ಷಿಣ ಭಾರತದಲ್ಲಿ ಭಾರತೀಯ ಜನತಾ ಪಕ್ಷವು ತನ್ನ ಪ್ರವೇಶವನ್ನು ಕರ್ನಾಟಕದ ಮೂಲಕ ಅದ್ದೂರಿಯಾಗಿ ಪ್ರಕಟಿಸಿದೆ. ಸುಮಾರು 40ಕ್ಕೂ ಹೆಚ್ಚು ವರ್ಷಗಳ ಕಾಲ ಕರ್ನಾಟಕದಲ್ಲಿ ಸಂಘ, ಜನಸಂಘ ನಂತರ ಭಾರತೀಯ ಜನತಾ ಪಕ್ಷದ ಮೂಲಕ ಹೋರಾಟದ ಬದುಕನ್ನೇ ಉಸಿರಾಗಿಸಿಕೊಂಡ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಸರಕಾರವನ್ನು ಐದು ವರ್ಷಗಳ ಕಾಲ ? ಮುನ್ನಡೆಸಲಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಕೆಲವು ವರ್ಷಗಳ ಹಿಂದೆಯೇ ಬಿರುಕು ಕಂಡು ಬಂದಿದೆ ಇಂದು ರಾಜ್ಯದಲ್ಲಿ ಇರುವ ಭಾರತೀಯ ಜನತಾ ಪಕ್ಷದ ಶಾಸಕರು ಒಂದು ಯಡಿಯೂರಪ್ಪ ಗುಂಪಿಗೆ ಸೇರಿದ್ದರೆ ಇನ್ನೊಂದು ಗುಂಪು ಅನಂತ್‌ಕುಮಾರ್ ಬಣದಲ್ಲಿ ಇದೆ. ಅನಂತ್‌ಕುಮಾರ್ ಅವರೊಂದಿಗೆ ಗುರುತಿಸಿಕೊಂಡ ಜಗದೀಶ್ ಶೆಟ್ಟರ್ ಅವರ ರಾಜಕೀಯ ಜೀವನವನ್ನು ವ್ಯವಸ್ಥಿತವಾಗಿ ತುಳಿಯುವ ಎಲ್ಲ ಕಾರ್ಯಗಳನ್ನು ಯಡಿಯೂರಪ್ಪ ಆದ್ಯಂತವಾಗಿ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸಕ್ರೀಯ ರಾಜಕಾರಣದಲ್ಲಿ ಇರುವ ವ್ಯಕ್ತಿಯನ್ನು ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಕುಳ್ಳಿರಿಸಿ ಏನೂ ಮಾಡಲಿಕ್ಕಾಗದಂತಹ ಪರಿಸ್ಥಿತಿಯನ್ನು ಯಡಿಯೂರಪ್ಪ ಅವರಿಗೆ ತಂದಿದ್ದಾರೆ.
ಅನಂತ್ ಕುಮಾರ್ ಅವರಿಗೆ ಭಾರತೀಯ ಜನತಾ ಪಕ್ಷದ ನಾಯಕರುಗಳು ಮುಂದಿನ ಲೋಕಸಭೆ ಚುನಾವಣೆ ಮುಗಿಯುವವರೆಗೆ ಯಾವುದೇ ಕಿತಾಪತಿಗೆ ಕೈಹಾಕದಿರಲು ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಹೀಗಾಗಿ ತನ್ನ ಬೆಂಬಲಿಗ ಸಚಿವ ಸ್ಥಾನದಿಂದ ವಂಚಿತವಾಗಿದ್ದರೂ ಏನೂ ಮಾಡಲಿಕ್ಕಾಗದಂತಹ ಪರಿಸ್ಥಿತಿಯಲ್ಲಿ ಇದ್ದಾರೆ. ಬೆಲೆ ಎರಿಕೆಯ ಪ್ರಭಾವದಲ್ಲಿ ನಲುಗುತ್ತಿರುವ ಯುಪಿಎಯನ್ನು ಹಣಿಯಲು ಇದು ಬಿಜೆಪಿಗೆ ಸೂಕ್ತ ಕಾಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 20 ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾದಲ್ಲಿ ಮತ್ತು 200 ಲೋಕ ಸಭಾ ಸ್ಥಾನಗಳನ್ನು ಬಿಜೆಪಿ ಪಡೆಯುವಲ್ಲಿ ಯಶಸ್ವಿಯಾದಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಬೀಸುವುದು ಖಂಡಿತ.
ಸಚಿವ ಸ್ಥಾನದಿಂದ ವಂಚಿತವಾಗಿರುವ ಜಗದೀಶ್ ಶೆಟ್ಟರ್ ಈ ಬಾರಿ ಬಂಡಾಯದ ಬಾವುಟ ಹಾರಿಸಿದಲ್ಲಿ ಅದಕ್ಕೆ ಖಂಡಿತವಾಗಿ ಅನಂತಕುಮಾರ್ ಬೆಂಬಲ ನೀಡುವುದು ನೂರಕ್ಕೆ ನೂರರಷ್ಟು ಸತ್ಯ. ಒಂದು ಪಕ್ಷ ಬಿಜೆಪಿ ಹಾಕಿರುವ ಲೆಕ್ಕಾಚಾರ ನಿಜವಾದಲ್ಲಿ ನಂತರದ ದಿನಗಳಲ್ಲಿ ಯಡಿಯೂರಪ್ಪ ಪರಿಸ್ಥಿತಿ ಗಂಭೀರವಾಗಬಹುದು. ಅವರನ್ನು ಹಿಂದಕ್ಕೆ ಹಾಕುವುದಕ್ಕೆ ಅನಂತ್ ಕುಮಾರ್ ಬಣ ಎಲ್ಲ ತಂತ್ರಗಳನ್ನು ಬಳಸಿಕೊಳ್ಳಬಹುದು. ಬಳ್ಳಾರಿಯ ಗಣಿ ಧಣಿಗಳಂತೂ ನೇರವಾಗಿ ಸುಷ್ಮಾ ಅನುಯಾಯಿಗಳು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ಪ್ರಬಲವಾಗಿದ್ದರೂ ಕೇಂದ್ರದಲ್ಲಿ ಅನಂತ್ ಕುಮಾರ್ ಮಾತು ನಡೆಯುತ್ತದೆ. ಸಧ್ಯದ ದಿನಗಳಲ್ಲಿ ಅವರದು ಇಕ್ಕಟ್ಟಿನ ಪರಿಸ್ಥಿತಿ. ಮುಂದಿನ ದಿನಗಳನ್ನು ಬಲ್ಲವರು ಯಾರು? ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಅನಂತಕುಮಾರ್ ಕೇಂದ್ರಕ್ಕೆ ಹೋಗುವುದರಲ್ಲಿ ಎರಡು ಮಾತಿಲ್ಲ. ಕೇಂದ್ರಕ್ಕೆ ಹೋದ ಮೇಲೆ ಅನಂತ್ ಸುಮ್ಮನಿರುತ್ತಾರೆಯೇ?
ಈಗ ಖಂಡಿತವಾಗಿ ತಕ್ಕಡಿ ಯಡಿಯೂರಪ್ಪನವರ ಪರವಾಗಿದೆ. ಲೋಕಸಭೆ ಚುನಾವಣೆ ಅವರ ಮುಂದಿನ ಹಣೆ ಬರಹ ಏನು ಎನ್ನುವುದನ್ನು ನಿರ್ಧರಿಸಲಿದೆ.
ಲೋಡ್ ಆಗುತ್ತಿದೆ......