ಹಿಂದಿಯಲ್ಲಿ ಸದ್ಮಾ ಎಂದರೆ ಆಘಾತ. ಇಡೀ ಚಿತ್ರವನ್ನು ನೋಡುತ್ತ ಹೋಗುತ್ತಿದ್ದಂತೆ ಕೊನೆಗೆ ಸದ್ಮಾ ಅಥವಾ ಆಘಾತವಾಗುವುದು ಪ್ರೇಕ್ಷಕನಿಗೆ. ನಾಯಕನಾಗಿ ಅಭಿನಯಿಸಿದ ಕಮಲ್ ಹಾಸನ್. ಬುದ್ದಿ ಭ್ರಮಣೆಯಾದವಳ ಪಾತ್ರದಲ್ಲಿ ನಟಿಸಿರುವ ಶ್ರೀದೇವಿ ಒಬ್ಬರಿಗೊಬ್ಬರು ನಟನೆಯಲ್ಲಿ ಸವಾಲು ಹಾಕಿದ್ದಾರೆ. ಗಂಭೀರ ವಿಷಯಗಳತ್ತ ಒಲವು ಇರುವ ಪ್ರೇಕ್ಷಕನಿಗೆ ಚಿತ್ರ ಬೋರ್ ಹೊಡೆಸುವುದೇ ಇಲ್ಲ.
80ರ ದಶಕದ ಅತ್ತ್ಯುತ್ತಮ ಹಿಂದಿ ಚಿತ್ರ ಎಂದು ಸದ್ಮಾಗೆ ಸರ್ಟಿಫಿಕೆಟ್ ನೀಡಿದರೆ ನಷ್ಟ ಏನೂ ಆಗಲಾರದು. ಇಂದಿನ ತಲೆ ಮಾರಿನವರಿಗೆ ಈ ಚಿತ್ರದ ಕಥೆಯನ್ನು ಸ್ವಲ್ಪದರಲ್ಲಿ ಹೇಳಿಬಿಡುತ್ತೇನೆ. ಒಂದು ಊರಲ್ಲಿ ಒಬ್ಬ ಮೂಕ ಯುವಕ (ಕಮಲ್ ಹಾಸನ್) ಆ ಊರಿಗೆ ಅದು ಯಾವುದೋ ಸ್ಥಿತಿಯಲ್ಲಿ ಬುದ್ಧಿ ಭ್ರಮಣೆಯಾದ (ಶ್ರೀದೇವಿ) ಹದಿ ಹರಯದ ಯುವತಿ ಬರುತ್ತಾಳೆ. ತಲೆ ಬಾಚಿಕೊಳ್ಳಲು ಬಾರದ ಇವಳನ್ನ ಅವನೇ ಸ್ವತಃ ಸಾಕಿ ಸಲಹಲು ಪ್ರಾರಂಭಿಸುತ್ತಾನೆ. ನಿಷ್ಕಳಂಕವಾಗಿ. ಮನಸಿನಲ್ಲಿ ದುರಾಸೆ ಇಲ್ಲದೆ..
ಒಂದು ದಿನ ಯುವತಿಯ ತಂದೆ ತಾಯಿಗಳಿಗೆ ಯುವತಿ ಇರುವ ಊರು ಗೊತ್ತಾಗುತ್ತದೆ. ಅದೇ ಸಂದರ್ಭದಲ್ಲಿ ಯುವಕ ಅವಳ ಬುದ್ದಿ ಭ್ರಮಣೆಯನ್ನು ಹೋಗಲಾಡಿಸುವುದಕ್ಕೆ ವೈದ್ಯನ ಬಳಿ ಚಿಕಿತ್ಸೆ ಕೊಡಿಸಲಾರಂಭಿಸುತ್ತಾನೆ. ಚಿಕಿತ್ಸೆ ಫಲಕಾರಿಯಾಗುತ್ತದೆ. ಅದೇ ಹೊತ್ತಿಗೆ ಯುವತಿಯ ಪಾಲಕರು ಬರುತ್ತಾರೆ. ಅಲ್ಲದೇ ಯುವಕನಿಗೂ ಕಾಯದೇ ಅವಳನ್ನು ಕರೆದುಕೊಂಡು ಹೋಗುತ್ತಾರೆ.
ಮಾಸ್ಟರ್ ಸೀನ್, ಇಡೀ ಚಿತ್ರದ ಸತ್ವ ಇರುವುದೇ ಕ್ಲೈಮಾಕ್ಸ್‌ನಲ್ಲಿ ಶ್ರೀದೇವಿ ರೈಲಿನಲ್ಲಿ ಕಿಟಕಿಯ ಬಳಿ ಕುಳಿತಿದ್ದಾಳೆ ಹೊರಗೆ ನಮ್ಮ ನಾಯಕ ಅವಳನ್ನು ಕರೆಯುತ್ತಿರುತ್ತಾನೆ. ಅವನ ಮೂಕ ಅಭಿನಯ ಎಷ್ಟು ಸಶಕ್ತವಾಗಿದೆ ಎಂದರೆ ಅಂತಹದೊಂದು ಅಭಿನಯ ಕಮಲ್‌ನಿಂದ ಮಾತ್ರ ಬರಲು ಸಾಧ್ಯ. ಅಷ್ಟೇ ಏಕೆ ಬುದ್ದಿ ಭ್ರಮಣೆಯಾಗಿ ಇದೀಗ ಚೇತರಿಸಿಕೊಳ್ಳುತ್ತಿರುವ ಶ್ರೀದೇವಿ ಮತ್ತು ಅವಳ ಪೇಲವ ಕಣ್ಣುಗಳು ಅವಳು ಅನುಭವಿಸಿರುವ ಮಾನಸಿಕ ಯಾತನೆಯ ಪ್ರತಿನಿಧಿಯಾಗಿ ನಮ್ಮೇದುರು ನಿಲ್ಲುತ್ತವೆ. ಬಹುಶಃ ನಾನು ಈ ಚಿತ್ರ ನೋಡಿದ್ದು ಎಂಟೋ ಇಲ್ಲ ಒಂಭತ್ತನೆ ತರಗತಿಯಲ್ಲಿ ಅದು ದೊಡ್ಡಪ್ಪನ ಮನಗೆ ರಜೆಯಲ್ಲಿ ಬೆಳಗಾವಿಗೆ ಹೋದ ಸಂದರ್ಭದಲ್ಲಿ ಈಗ್ಯಾಕೆ ನೆನಪಿಗೆ ಬಂದಿತೊ ಗೊತ್ತಿಲ್ಲ.
ಮೊದಲು ಶ್ರೀದೇವಿಗೆ ಆಘಾತ, ನಂತರ ಅವಳನ್ನು ಕಳೆದುಕೊಳ್ಳುವ ಭಯದಲ್ಲಿ ಕಮಲ್ ಹಾಸನ್ ರೂಪದಲ್ಲಿರುವ ನಮ್ಮ ನಾಯಕನಿಗೆ ಆಘಾತ. ಅಯ್ಯೋ ಶಿವನೆ ಇದು ಕೃತಘ್ನ ಜಗತ್ತು ಎಂದು ನಾವು ಆಘಾತಗೊಳ್ಳುವುಗದು ಒಟ್ಟಿನಲ್ಲಿ ಒಂದೇ ಸಮಯದಲ್ಲಿ ಮೂವರಿಗೆ "ಸದ್ಮಾ"
ಲೋಡ್ ಆಗುತ್ತಿದೆ......