ಸಹೊದ್ಯೋಗಿ ನಾಗೇಂದ್ರ ಅವರು ವೀರ್ ಸಾವರ್ಕರ್ ಅವರ ಜನ್ಮ ದಿನ ಮೇ 28ರಂದು ಅವರ ಕುರಿತು ಬರೆದ ಲೇಖನ ಚೆನ್ನಾಗಿದೆ ಆದರೆ ಇಲ್ಲಿ ಹಲವಾರು ಸಂಶಯಗಳು ಮತ್ತು ಅಭಿಪ್ರಾಯಗಳು ಸಾಧಾರಣವಾಗಿ ಗೊಂದಲದ ಗೂಡಾಗಿ ಪರಿಣಮಿಸಿವೆ.
ಮೊದಲನೆಯದಾಗಿ Basic Human Nature ಆಧಾರದಲ್ಲಿ ಸಾವರ್ಕರ್ ಕ್ಷಮೆಯಾಚನೆ ಕೇಳಿದ್ದರೊ ಇಲ್ಲವೋ ಎನ್ನುವುದನ್ನು ಮೊದಲು ನೋಡೊಣ. ಭಾರತದಲ್ಲಿ ಬ್ರಿಟಿಷ್ ಬಂಧಿಯಾಗಿ ಇಂಗ್ಲೆಂಡಿಗೆ ರವಾನಿಸುತ್ತಿದ್ದ ಸಂದರ್ಭದಲ್ಲಿ ಹಡಗಿನಿಂದ ಸಮುದ್ರಕ್ಕೆ ಜಿಗಿದು ಈಜಿ ಫ್ರಾನ್ಸ್ ಸೇರಿದ ಸಾಹಸಿ ವೀರ್ ಸಾವರ್ಕರ್. ಓರ್ವ ಸಾಹಸಿ ಎಂದಾದರೂ ಪ್ರಾಣ ಭಿಕ್ಷೆ ಬೇಡುವ ಸಾಧ್ಯತೆಗಳು ಉಂಟಾ? ಸಾಧ್ಯವೇ ಇಲ್ಲ ಎನ್ನುವುದನ್ನು ಇತಿಹಾಸದ ಪ್ರಸಿದ್ಧರು ತಮ್ಮ ಜೀವನವನ್ನೆ ಉದಾಹರಣಾ ರೂಪದಲ್ಲಿ ತೋರಿಸಿದ್ದಾರೆ. ಅಕ್ಬರ್ ಕಾಲದ ರಾಣಾ ಪ್ರತಾಪ್ ಸಿಂಹ, ಪೃಧ್ವಿರಾಜ್ ಚೌಹಾಣ್ ಸುಖಾ ಸುಮ್ಮನೆ ಸಾವಿಗೆ ನರಕದ ಬದುಕಿಗೆ ಯಾಕೆ ಬಲಿಯಾಗಬೇಕಿತ್ತು. ಒಂದೇ ಒಂದು ಕಾರಣ ಅವರು ಸಾಹಸಿಗಳು ಮತ್ತು ಸಾಹಸಿಗಳಲ್ಲಿ ಧೈರ್ಯವಂತರಲ್ಲಿ ಸ್ವಾಭಿಮಾನ ಎನ್ನುವುದು ಜನ್ಮಜಾತ. ಅಷ್ಟೇ ನಾಲ್ಕನೆ 1789ರಲ್ಲಿ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಮಡಿದ ಟಿಪ್ಪು ಸುಲ್ತಾನ್ ಕೂಡ ಇದೇ ವರ್ಗಕ್ಕೆ ಸೇರಿದವನು ಎನ್ನುವುದನ್ನು ಇನ್ನೊಂದು ಉದಾಹರಣೆಯಾಗಿ ನೀಡುತ್ತಿದ್ದೇನೆ. ಒಟ್ಟಾರೆ ಒಂದು ಅಂಶ ಇಲ್ಲಿ ಸ್ಪಷ್ಟವಾಗುತ್ತದೆ ವೀರ್ ಸಾವರ್ಕರ್ ಕ್ಷಮೆಯಯಾಚನೆಯನ್ನು ಕೇಳಿರಲಿಕ್ಕಿಲ್ಲ ಎನ್ನುವುದು ಮಾನವ ಸ್ವಭಾವದ ಮೂಲಕ ವೇದ್ಯವಾಗುತ್ತದೆ.
ಎರಡನೇ ಪ್ರಶ್ನೆ ಗಾಂಧಿ ಹಂತಕ ಗೊಡ್ಸೆ ಮತ್ತು ಸಾವರ್ಕರ್ ನಡುವಿನ ಸಂಬಂಧ. ಸಾವರ್ಕರ್ ಹಿಂದೂ ಮಹಾಸಭಾದ ಸ್ಥಾಪಕರು. ಸಭೆ ಸಂಘಟನೆ ಎಂದ ಮೇಲೆ ಸಾವಿರಾರು ಜನರು ಬರುತ್ತಾರೆ ಹೋಗುತ್ತಾರೆ. ಕಾಲಾನಂತರದಲ್ಲಿ ಬೆಳೆದ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಉಂಟಾದ ಭ್ರಮ ನಿರಸನಗಳು ಈ ವಿಘಟನೆಗೆ ಕಾರಣವಾಗಿರಬಹುದು ಇಲ್ಲವೇ ವೈಯಕ್ತಿಕ ಹಿತಾಸಕ್ತಿಗಳು ಕಾರಣವಾಗಬಹುದು. ಅದೇ ರೀತಿ ಗೋಡ್ಸೆ, ಹಿಂದೂ ಮಹಾಸಭಾಕ್ಕೆ ಬಂದಿರಬಹದು. ಭ್ರಮ ನಿರಸನಗೊಂಡು ಹೋಗಿರಬಹುದು. ಇಂದಿಗೂ ಕೂಡ ಕೆಲ ಸಂಘಟನೆಗಳ ಆದರ್ಶಗಳಿಗೆ ಜೋತು ಬಿದ್ದು ನಂತರ ಮರಳುವ ಪ್ರಕ್ರಿಯೆ ನಡೆದು ಬಂದಿದೆ. ಭವಿಷ್ಯತ್ತಿನಲ್ಲೂ ಇದೇ ಸಂಪ್ರದಾಯ ಮುಂದುವರಿಯುತ್ತದೆ ಎಂದು ಖಡಾ ಖಂಡಿತವಾಗಿ ಹೇಳಬಹುದು. ಇದು ಮಾನವ ಜನ್ಯ ಸ್ವಭಾವ. ಹೀಗಾಗಿ ಗೊಡ್ಸೆ, ಅಪ್ಟೆ ಮಾಡಿದ ಹತ್ಯೆಯಲ್ಲಿ ಸಾವರ್ಕರ್ ಪಾತ್ರ ಇತ್ತು ಎಂದು ಕೇವಲ ಸಂಘಟನಾತ್ಮಕ ಸಂಬಂಧಗಳ ಆಧಾರದ ಮೇಲೆ ಮಾಡುವ ಆಪಾದನೆಗಳಲ್ಲಿ ಹುರುಳಿಲ್ಲ.
ಮೂರನೆ ವಿಚಾರ ವೀರ್ ದೇಶಭಕ್ತನಲ್ಲ ಎಂದು ವಾದಿಸುವುದು ವೃಥಾ ಕಾಲಕ್ಷೇಪ. ಆಕಾಶತ್ಪತಿತಃ ತೋಯಂ ಯಥಾ ಗಚ್ಚತಿ ಸಾಗರಃ. ತಥಾ ಸರ್ವದೇವ ನಮಸ್ಕಾರಂ ಶ್ರೀ ಕೇಶವಂ ಪ್ರತಿಗಚ್ಚತಿಃ ಎಂಬ ಶ್ಲೋಕದ ಅರ್ಥ ಏನೆಂದರೆ, ಆಕಾಶದಿಂದ ಬೀಳುವ ಮಳೆ ಹನಿಯು ನದಿಯಾಗಿ ಯಾವ ರೀತಿ ಸಾಗರವನ್ನು ಸೇರುವುದೊ ಅದೇ ರೀತಿ ಎಲ್ಲ ದೇವರುಗಳಿಗೂ ಮಾಡಿದ ನಮಸ್ಕಾರಗಳು ಕೇಶವನಿಗೆ ತಲುಪುತ್ತವೆ. ಇಲ್ಲಿ ಈ ಉದಾಹರಣೆ ಏಕೆ ನೀಡಬೇಕಾಯಿತು ಎಂದರೆ, ಸಾವರ್ಕರ್ ಅವರ ಉಗ್ರ ರಾಷ್ಟ್ರೀಯವಾದ ಮತ್ತು ಗಾಂಧಿಜಿಯ ಅಹಿಂಸಾತ್ಮಕ ಸಿದ್ದಾಂತದಡಿಯಲ್ಲಿ ಬೆಳೆದು ಬಂದ ರಾಷ್ಟ್ರೀಯ ವಾದದ ಹರಿವು ಬೇರೆಯಾಗಿದ್ದರೂ ರಾಷ್ಟ್ಪವನ್ನು ಬ್ರಿಟಿಷರಿಂದ ಮುಕ್ತಿಗೊಳಿಸುವುದು ಮುಖ್ಯ ಉದ್ದೇಶವಾಗಿತ್ತು. ಕಾಂಗ್ರೆಸ್‌ನಂತಹ ಮತ್ತು ಗಾಂಧಿಜಿಯಂತಹವರು ತಮ್ಮದೇ ಸಿದ್ದಾಂತ ಸರಿ ಎಂದು ಉಳಿದದ್ದು ಬುರ್ನಾಸು ಎಂದು ವಾದಿಸಿದ ಪರಿಣಾಮವಾಗಿ ನಾವು ಭಗತ್ ಸಿಂಗ್‌ನನ್ನು, ಸುಖದೇವ್, ರಾಜಗುರು ಅವರನ್ನು ವಿನಾಕಾರಣ ನೇಣಿಗೆ ನೀಡಬೇಕಾಯಿತು. ಅಂದು ಗಾಂಧಿಜಿ ದುಂಡು ಮೇಜಿನ ಪರಿಷತ್ತಿನಲ್ಲಿ ಒಂದೇ ಒಂದು ಭಗತ್ ಸಿಂಗ್ ಕುರಿತು ಮಾತನಾಡಿದ್ದರೆ ಭಗತ್ ಸಿಂಗ್ ನೇಣಿಗೆ ಎರುತ್ತಲೇ ಇರಲಿಲ್ಲ. ಅದು ಹೋಗಲಿ, ಸುಭಾಷ್ ಚಂದ್ರ ಬೋಸ್ ಅವರು ಕಾಂಗ್ರೆಸ್ ಅಧ್ಯಕ್ಷ ಎಂದು ಚುನಾಯಿತರಾದ ಮೇಲೆ ಇದೇ ಗಾಂಧಿ ಕಾಂಗ್ರೆಸ್ ಸಭೆಗೆ ಸುಭಾಷ್ ಚಂದ್ರ ಅಧ್ಯಕ್ಷ ಪದವಿಯಲ್ಲಿ ಇರುವವರೆಗೆ ಕಾಲಿಡುವುದಿಲ್ಲ ಎಂದಿದ್ದು ಇತಿಹಾಸದ ಕಾಲಗರ್ಭದಲ್ಲಿ ಸೇರಿಹೋಗಿದೆ. ಇಲ್ಲಿಗೂ ಗಾಂಧಿಜಿಯವರ ರಾಜಕೀಯದ ಅಪಸವ್ಯಗಳು ಅಲ್ಲಿಗೆ ಮುಗಿಯಲಿಲ್ಲ. ದ್ವಿತೀಯ ಮಹಾಯುದ್ದದ ಸಂದರ್ಭ. ಅಹಿಂಸೆ, ಅಹಿಂಸೆ ಎಂದು ಹೇಳುವ ಇದೇ ಮಹಾತ್ಮಾ ಗಾಂಧಿಜಿ, ದ್ವಿತೀಯ ಯುದ್ಧ ಮುಗಿಯುವವರೆಗೂ ಭಾರತದಲ್ಲಿ ಸ್ವಾತಂತ್ರ್ಯಾಂದೊಲವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಬ್ರಿಟಿಷರಿಗೆ ವಾಗ್ದಾನ ಮಾಡಿದ್ದರು. ಅಂದರೆ ಇದರ ಅರ್ಥ ಏನಾಗಬಹುದು ? ನಾನು ಹಿಂಸೆ ಮಾಡುವುದಿಲ್ಲ. ಹಿಂಸೆಯಲ್ಲಿ ತೋಡಗಿಸಿಕೊಳ್ಳುವವರಿಗೆ ನನ್ನ ಬೆಂಬಲ ಇದೆ ಎಂದು ಹೇಳಿದ ಅರ್ಥವಾಯಿತಲ್ಲವೆ?
(ನಾನು ಎಂದೊ ಓದಿದ ಜೈನ ಕಥೆ ಇಲ್ಲಿ ನೆನಪಿಗೆ ಬರುತ್ತಿದೆ ಒಂದಿಷ್ಟು ಹಂಚಿಕೊಳ್ಳುವ ಪ್ರಯತ್ನ. ಇಬ್ಬರು ಹುಡುಗರು ಒಂದು ಮಾವಿನ ಗಿಡಕ್ಕೆ ಕಲ್ಲು ಹೊಡೆಯುತ್ತಿರುತ್ತಾರೆ. ಒಬ್ಬನಿಗೆ ಗಿಡದಲ್ಲಿನ ಮಾವಿನ ಹಣ್ಣು ಬೀಳಿಸುವಾಸೆ ಇನ್ನೊಬ್ಬನಿಗೆ ಅದೇ ಗಿಡದಲ್ಲಿ ಕುಳಿತ ಗಿಳಿಯನ್ನು ಕಲ್ಲಿನಿಂದ ಹೊಡೆಯುವಾಸೆ. ದುರಾದೃಷ್ಟವಶಾತ್ ಮಾವಿನ ಹಣ್ಣಿಗೆ ಕಲ್ಲು ಹೊಡೆಯುತ್ತಿವನ ಕಲ್ಲು ಗಿಳಿಗೆ ತಾಗುತ್ತದೆ. ಗಿಳಿಗೆ ಕಲ್ಲು ಹೊಡೆಯುತ್ತಿದ್ದ ಬಾಲಕನ ಕಲ್ಲು ಹಣ್ಣಿಗೆ ತಾಗಿ ನೆಲಕ್ಕೆ ಬೀಳುತ್ತದೆ ಹಾಗಿದ್ದರೆ ಇಲ್ಲಿ ಹಿಂಸೆ ಯಾರಿಂದ ಘಟಿಸಿತು. ಮನಸ್ಸಿನಲ್ಲಿ ಹಿಂಸಿಸುವುದು ಹಿಂಸೆಯೇ ಅಲ್ಲವೇ)
1939-40ರಲ್ಲಿ ದ್ವಿತೀಯ ಮಹಾಯುದ್ದ ಕೊನೆಗೊಂಡ ನಂತರ ಮುಂಬೈನಲ್ಲಿ ಬ್ರಿಟಿಷ್ ಆಡಳಿತದಲ್ಲಿ ಇದ್ದ ಭಾರತೀಯ ನೌಕಾದಳ ಕೂಡ ಬಂಡಾಯ ಎದ್ದಿದ್ದು, ಬ್ರಿಟಿಷರ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಅಂದು ಬ್ರಿಟಿಷರ ನೌಕಾದಳದ ಪ್ರಾಬಲ್ಯದ ಎದುರು ಸರಿಸಾಟಿಯಾದವರು ಈ ಜಗತ್ತಿನಲ್ಲಿ ಆಗಿನ್ನೂ ಹುಟ್ಟಿರಲಿಲ್ಲ. ಅಂತಹ ಪ್ರಾಬಲ್ಯದಲ್ಲಿ ಹುಳುಕು ಬಿದ್ದ ಮೇಲೆ ನಿಲ್ಲಲಾಗುತ್ತದೆಯೇ? 1942ರಲ್ಲಿ ಗಾಂಧಿಜಿ ಕೈಗೆತ್ತಿಕೊಂಡ ಚಲೇ ಜಾವ್ ಚಳುವಳಿಯು ಅಸಹಕಾರ ಚಳುವಳಿಯ ತರಹ ಎಕೆ ಯಶಸ್ವಿಯಾಗಲಿಲ್ಲ.
ಕೊನೆಯದಾಗಿ ಈ ದೇಶದಲ್ಲಿ ದ್ವಿರಾಷ್ಟ್ರ ಸಿದ್ದಾಂತದ ಬೀಜವನ್ನು ಬಿತ್ತಿದ್ದು ಸಾವರ್ಕರ್ ಎಂದು ವಾದ ಮಂಡಿಸಲಾಗಿದೆ ಮತ್ತು ಮಂಡಿಸಲಾಗುತ್ತದೆ. ಪಾಕಿಸ್ತಾನ ಪರಿಕಲ್ಪನೆ ಜನ್ಮ ನೀಡಿದ ಮಹ್ಮದ್ ಅಲಿ ಜಿನ್ನಾ ಅವರು ಬಾಲ ಗಂಗಾಧರ್ ಟಿಳಕ್ ಅವರ ಕಟ್ಟಾ ಅನುಯಾಯಿಯಾಗಿದ್ದರು ಎನ್ನುವುದನ್ನು ಮೊದಲು ಗಮನಿಸಬೇಕಾದ ಸಂಗತಿ. ಮತ್ತು ಟಿಳಕ್ ಕಾಂಗ್ರೆಸ್‌ನ ಪ್ರಗತಿಪರ ವಾದಿಗಳಲ್ಲಿನ ಮುಂಚೂಣಿ ನಾಯಕರು. ಆಗ ಕಾಂಗ್ರೆಸ್‌ನಲ್ಲಿ ತೀವ್ರಗಾಮಿಗಳ ಸಂಖ್ಯೆ ಅಪಾರವಾಗಿತ್ತು. ಆಗಿನ್ನೂ ಗಾಂಧಿಜಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ದುಮುಕಿರಲಿಲ್ಲ. ಟಿಳಕ್ ನಿಧನಾನಂತರ ನೆಹುರು ಮನೆತನದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಗಾಂಧಿಜಿ ಏಕಕಾಲಕ್ಕೆ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದರು. ಇದೇ ಸಂದರ್ಭದಲ್ಲಿ ತೀವ್ರಗಾಮಿಗಳಲ್ಲಿ ಗುರುತಿಸಿಕೊಂಡಿದ್ದ ಜಿನ್ನಾ ಕೂಡ ಕಾಂಗ್ರೆಸ್‌ನಲ್ಲಿ ಇದ್ದರು. ಕೆಲವರ ರಾಜಕೀಯ ಮಹಾತ್ವಾಂಕಾಕ್ಷೆಗಳಲ್ಲಿ ಜಿನ್ನಾ ಬಲಿಯಾಗಬೇಕಾಯಿತು. ನಂತರವೇ ಜಿನ್ನಾ ಕಾಂಗ್ರೆಸ್‌ನಿಂದ ಹೊರಬಿದ್ದು ಸ್ವತಂತ್ರ ಮುಸ್ಲೀಂ ಲೀಗ್ ಸ್ಥಾಪಿಸಿ, ದ್ವಿರಾಷ್ಟ್ರ ಸಿದ್ದಾಂತವನ್ನು ಮಂಡಿಸಬೇಕಾಯಿತು. ಹಾಗಿದ್ದರೆ ಜಿನ್ನಾ ಅವರ ದ್ವಿ ರಾಷ್ಟ್ರ ಸಿದ್ದಾಂತಕ್ಕೆ ಯಾರು ಕಾರಣರು ಎಂದು ಹೇಳಬಹುದು. ಸಾವರ್ಕರೊ ಅಥವಾ ಕಾಂಗ್ರೆಸ್ಸೊ?

ಲೋಡ್ ಆಗುತ್ತಿದೆ......